ನವ ದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಲ್ಲಿನ ಅತ್ಯಂತ ಹಿಂದುಳಿದಿರುವ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ ನ ಏಳು ಸದಸ್ಯರ ಸಾಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು 6-1 ಅಂತರದ ಬಹುಮತದ ತೀರ್ಪಿನ ಮೂಲಕ ಒಳ ಮೀಸಲಾತಿ ಪ್ರಸ್ತಾವವನ್ನು ಎತ್ತಿ ಹಿಡಿದಿದೆ. ನ್ಯಾ. ಬೇಲಾ ಮಾತ್ರ ಈ ಪ್ರಸ್ತಾವಕ್ಕೆ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆರು ಪ್ರತ್ಯೇಕ ತೀರ್ಪುಗಳನ್ನು ಬರೆಯಲಾಗಿದೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ರಾಜ್ಯ ಪ್ರಕರಣದ ಸಂಬಂಧ 2004ರಲ್ಲಿ ಐದು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನೀಡಿದ್ದ ತೀರ್ಪನ್ನು ಈ ತೀರ್ಪು ಅನೂರ್ಜಿತಗೊಳಿಸಿದೆ.
ಪರಿಶಿಷ್ಟ ಜಾತಿಗಳು ಏಕಕುಲದ ಗುಂಪಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅತಿ ಹೆಚ್ಚು ತಾರತಮ್ಯಕ್ಕೊಳಗಾಗಿರುವ ಸಮುದಾಯಗಳಿಗೆ ಶೇ. 15ರಷ್ಟು ಮೀಸಲಾತಿಯಲ್ಲಿ ಹೆಚ್ಚುವರಿ ಮೀಸಲಾತಿ ಒದಗಿಸಬಹುದು ಎಂದು ತೀರ್ಪು ನೀಡಿದೆ.