ಬೆಂಗಳೂರು:
ಶಾಮನೂರು ಶಿವಶಂಕರಪ್ಪ ಅವರು ತಮ್ಮ ಹೇಳಿಕೆಗೆ ಬದ್ಧ ಎಂದು ಹೇಳಿರುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೇಳಿದಾಗ ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಆಗುವುದಿಲ್ಲ ಎಂದು ತಿಳಿಸಿದರು.
ಚಿತ್ರಕಲಾ ಪರಿಷತ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಈ ವಿಚಾರ ತಿಳಿಸಿದರು. “ಅವರು (ಶಾಮನೂರು ಶಿವಶಂಕರಪ್ಪ) ಒಂದು ಸಮಾಜದ ಅಧ್ಯಕ್ಷರು. ಅವರಿಗೆ ಆ ಸಮಾಜಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಸಹಜವಾಗಿ ತಮಗೆ ಉತ್ತಮ ಹುದ್ದೆ ನೀಡಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಆಗುವುದಿಲ್ಲ. ನಾವು ಎಲ್ಲರನ್ನೂ ಗಮನಿಸಬೇಕು. ಮುಖ್ಯಮಂತ್ರಿಗಳು ಎಲ್ಲರನ್ನೂ ಸಮತೋಲನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಸಿಎಂ ಆಡಳಿತದ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರು ಪ್ರಶ್ನೆ ಮಾಡಿರುವ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಗಳಿಗೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಮಂತ್ರಿಗಳಾದ ನಮ್ಮಲ್ಲೂ ಸಾಮಾನ್ಯ ಪ್ರಜ್ಞೆ ಇರಬೇಕು. ನಾವು ಯಾರಾದರೂ ಒಬ್ಬರಿಗೆ ಪೋಸ್ಟಿಂಗ್ ನೀಡಲು ಸಾಧ್ಯವೇ? ನಾವು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಬೇಕು. ಸರ್ಕಾರ ಎಂದರೆ ಎಲ್ಲವೂ ಮುಖ್ಯಮಂತ್ರಿ ಮೇಲೆ ಹಾಕಬಾರದು. ಸಚಿವರಾದ ನಾವುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಎಲ್ಲಾ ಕಾಲದಲ್ಲೂ ಇದು ನಡೆದುಕೊಂಡು ಬಂದಿದೆ. ಶಾಮನೂರು ಶಿವಶಂಕರಪ್ಪ ಅವರು ನಮ್ಮ ಪಕ್ಷದ ನಾಯಕರು. ಒಂದು ಸಮಾಜದ ಸಂಘದ ಅಧ್ಯಕ್ಷರು. ಅವರ ಮೇಲೂ ಒತ್ತಡ ಇರುತ್ತದೆ. ಕೆಲವು ಅಧಿಕಾರಿಗಳು ಸಚಿವರ ಬಳಿಯೂ ಹೋಗಿ ಮನವಿ ಮಾಡಿದ್ದಾರೆ. ಈ ರೀತಿ ಕೇಳುವುದರಲ್ಲಿ ತಪ್ಪಿಲ್ಲ” ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಮುಂದಿನ ಒಂದು ವರ್ಷದ ಒಳಗೆ ಸರ್ಕಾರ ಬೀಳುತ್ತದೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಪರಮೇಶ್ವರ್ ಅವರು ಇದಕ್ಕೆ ಉತ್ತರ ನೀಡಿದ್ದಾರೆ” ಎಂದು ತಿಳಿಸಿದರು.
ಆಮೀಷ ಒಡ್ಡಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಗೆ ಸೆಳೆಯುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಅವರು ನಿಮ್ಮ ವಿರುದ್ಧ ಆರೋಪಿಸಿದ್ದಾರೆ ಎಂದು ಕೇಳಿದಾಗ, “ಅವರು ಆಪರೇಷನ್ ಕಮಲದ ಬಗ್ಗೆ ಯೋಚಿಸಲಿ. ಸದನದಲ್ಲಿ ಶಾಸಕ ಶ್ರೀನಿವಾಸ್ ಗೌಡ ಅವರು ಏನು ಹೇಳಿದರು. ಹೊರಗಡೆ ಏನೆಲ್ಲಾ ನಡೆಯಿತು ಎಂದು ಯೋಚಿಸಲು ಹೇಳಿ. ಅವರ ಸಂಸತ್ ಕ್ಷೇತ್ರದಲ್ಲಿ ಏನೆಲ್ಲಾ ಆಗಿದೆ ಎಂದು ಮೆಲುಕು ಹಾಕಲಿ” ಎಂದು ತಿರುಗೇಟು ನೀಡಿದರು.