Home ಶಿವಮೊಗ್ಗ ಶಿವಮೊಗ್ಗ: ಕುವೆಂಪು ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಯ ಯುಗಾರಂಭ; ಬೆಂಗಳೂರಿನಿಂದ ಬಂದಿಳಿದ ಇಂಡಿಗೋ ಚೊಚ್ಚಲ ವಿಮಾನ

ಶಿವಮೊಗ್ಗ: ಕುವೆಂಪು ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಯ ಯುಗಾರಂಭ; ಬೆಂಗಳೂರಿನಿಂದ ಬಂದಿಳಿದ ಇಂಡಿಗೋ ಚೊಚ್ಚಲ ವಿಮಾನ

22
0
Shimoga: First Commercial Flight Commences from Kuvempu Airport
Shimoga: First Commercial Flight Commences from Kuvempu Airport

ಪ್ರತಿ ಟಿಕೆಟ್ ಮೇಲೆ ₹ 500 ಸಬ್ಸಿಡಿ: ಎಂ.ಬಿ.ಪಾಟೀಲ

ಶಿವಮೊಗ್ಗ:

ಇಲ್ಲಿಂದ 15 ಕಿ.ಮೀ. ದೂರದ ಸೋಗಾನೆಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಕುವೆಂಪು ವಿಮಾನ ನಿಲ್ದಾಣಕ್ಕೆ ಇಂಡಿಗೋ ಸಂಸ್ಥೆಯ ವಿಮಾನವು ಗುರುವಾರ ಬಂದಿಳಿಯುವ ಮೂಲಕ ಮಲೆನಾಡು ಭಾಗದ ಪ್ರಪ್ರಥಮ ಏರ್‍‌ಪೋರ್ಟ್‌ನಲ್ಲಿ ವಿಮಾನಯಾನ ಸೇವೆಗಳು ಆರಂಭವಾದವು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ ಮುಂತಾದ ಗಣ್ಯರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.50ಕ್ಕೆ ಹೊರಟ ಚೊಚ್ಚಲ ವಿಮಾನವು 11.05ಕ್ಕೆ ಶಿವಮೊಗ್ಗಕ್ಕೆ ಬಂದಿಳಿಯುವುದರೊಂದಿಗೆ ಮಲೆನಾಡಿನಲ್ಲಿ ಹೊಸ ಅಧ್ಯಾಯ ಆರಂಭವಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ, ವಾಟರ್‍‌ ಸೆಲ್ಯೂಟ್‌ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಜೊತೆಗೆ ಬಂದಿಳಿದ ಎಲ್ಲ ಪ್ರಯಾಣಿಕರಿಗೂ ಸಚಿವ ಮಧು ಬಂಗಾರಪ್ಪ ಅವರಲ್ಲದೆ ವಿಮಾನ ನಿಲ್ದಾಣದ ಸಿಬ್ಬಂದಿ ಗುಲಾಬಿ ಹೂವು ಮತ್ತು ಸಿಹಿ ನೀಡಿ ಸ್ವಾಗತಿಸಿದರು.

ವಾಪಸ್ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಸಚಿವ ಎಂ‌.ಬಿ.ಪಾಟೀಲ ಜತೆ ಸಚಿವ ಮಧು ಬಂಗಾರಪ್ಪ ‌ಕೂಡ ಪ್ರಯಾಣಿಸಿದರು.

ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ ಬಿ ಪಾಟೀಲ, “ಕರ್ನಾಟಕದ ಅಭಿವೃದ್ಧಿಯ ಯಶೋಗಾಥೆಯಲ್ಲಿ ಇದೊಂದು ವಿನೂತನ ಅಧ್ಯಾಯವಾಗಿದೆ. ರಸಋಷಿ ಕುವೆಂಪು ಅವರ ಹೆಸರನ್ನು ಹೊರಲಿರುವ ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ಮೂಲಕ ಮಲೆನಾಡು ಮತ್ತು ಮಧ್ಯಮ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಮಜಲನ್ನು ಮುಟ್ಟಲಿದೆ” ಎಂದು ಬಣ್ಣಿಸಿದರು.

ಜೊತೆಗೆ, ಯೋಜನೆಯ ಕನಸು ಕಂಡು, ಅದರ ಅನುಷ್ಠಾನಕ್ಕೆ ಶ್ರಮಿಸಿದ ಯಡಿಯೂರಪ್ಪ ಮತ್ತು ಉಳಿದವರ ಪ್ರಯತ್ನಗಳನ್ನು ಉಲ್ಲೇಖಿಸಿದರು.

ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ- ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ ₹500 ರುಪಾಯಿ ರಾಜ್ಯ ಸರ್ಕಾರ ಸಬ್ಸಿಡಿ‌ ನೀಡಲಿದೆ ಎಂದು ಸಚಿವರು ಘೋಷಿಸಿದರು.

779 ಎಕರೆ ವಿಸ್ತಾರದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ಮೂಲಯೋಜನೆಯ ವಿನ್ಯಾಸವನ್ನು ಪರಿಷ್ಕರಿಸಿ, ಏರ್‍‌ಬಸ್‌-320 ಮಾದರಿಯ ವಿಮಾನಗಳು ಕೂಡ ಬಂದಿಳಿಯುವ ಮತ್ತು ರಾತ್ರಿ ವೇಳೆ ಇಳಿಯುವ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗುತ್ತಿದೆ. ಇದರ ಕಾಮಗಾರಿ ಮುಗಿಯುತ್ತಿದ್ದಂತೆಯೇ ಶಿವಮೊಗ್ಗವನ್ನು ಭಾರತದ ಅಭಿವೃದ್ಧಿ ಕಾರಿಡಾರ್ ಜತೆ ಜೋಡಿಸಲಾಗುವುದು. ಇದಕ್ಕೆ ತಕ್ಕಂತೆ 3,050 ಮೀಟರ್ ಉದ್ದದ ರನ್‌ವೇ ನಿರ್ಮಿಸಲಾಗಿದ್ದು, 4,340 ಚದರ ಮೀಟರ್ ವಿಸ್ತೀರ್ಣದ ಪ್ರಯಾಣಿಕರ ಟರ್ಮಿನಲ್‌ ಹೊಂದಿದೆ ಎಂದು ಅವರು ವಿವರಿಸಿದರು.

ಸದ್ಯಕ್ಕೆ ಇಲ್ಲಿಂದ ಬೆಂಗಳೂರಿಗೆ ಕನೆಕ್ಟಿಂಗ್ ವಿಮಾನಯಾನ ಸೇವೆ ಲಭ್ಯವಾಗಲಿದೆ. ಬೆಂಗಳೂರನ್ನು ಕೇವಲ 60 ನಿಮಿಷಗಳಲ್ಲಿ ತಲುಪಿ, ಅಲ್ಲಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ತೆರಳಲಿರುವ ಇಂಡಿಗೋ ಸಂಸ್ಥೆಯ ವಿಮಾನಗಳ ಮೂಲಕ ಪ್ರಯಾಣವನ್ನು ಮುಂದುವರಿಸಬಹುದು. ಉಡಾನ್‌ ಯೋಜನೆಯಡಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೇ ಅಧಿಕೃತ ವಾಗಿ ಪ್ರಕಟಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ನಾನಾ ನಗರಗಳಿಗೆ ಇಲ್ಲಿಂದ ನೇರ ವಿಮಾನಯಾನ ಆರಂಭಿಸಲಾಗುವುದು ಎಂದು ಅವರು ನುಡಿದರು.

ಮಲೆನಾಡಿನ ಕೇಂದ್ರಸ್ಥಾನವಾದ ಶಿವಮೊಗ್ಗದಲ್ಲಿ ವಿಮಾನಯಾನ ಸೇವೆ ಲಭ್ಯವಾಗಬೇಕೆಂಬುದು ದಶಕಗಳ ಕನಸಾಗಿತ್ತು. ವಿಮಾನಸೇವೆಗೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಮೂರು ವಾರಗಳ ಟಿಕೆಟ್‌ ಈಗಾಗಲೇ ಬುಕಿಂಗ್‌ ಆಗಿದೆ. ಇಲ್ಲಿಂದ ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನು ಕೇವಲ ಐದು ಗಂಟೆಗಳಲ್ಲಿ ತಲುಪಬಹುದು. ಆರ್ಥಿಕತೆಯ ಬೆಳವಣಿಗೆಗೆ ತಕ್ಕಂತೆ ನಮ್ಮ ಮೂಲಸೌಕರ್ಯ ಮತ್ತು ಅಭಿವೃದ್ಧಿ ಪರಿಕಲ್ಪನೆಗಳು ಕೂಡ ಬದಲಾಗುತ್ತಿರುತ್ತವೆ ಎಂದು ಸಚಿವರು ಹೇಳಿದರು.

ಮೊದಲ ವಿಮಾನದಲ್ಲಿ ಪ್ರಯಾಣಿಸಿದ ಪ್ರಮುಖರು

ಸಚಿವ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಶಾಸಕರಾದ ಬಿ ವೈ ವಿಜಯೇಂದ್ರ, ಗೋಪಾಲಕೃಷ್ಣ ಬೇಳೂರು, ಅರಗ ಜ್ಞಾನೇಂದ್ರ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಮೂಲಸೌಕರ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗೌರವ್‌ ಗುಪ್ತ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌ ಸೆಲ್ವಕುಮಾರ್, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ಆರ್‌ ರವಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ, ಮಾಜಿ ಸಚಿವ ಎಚ್.ಹಾಲಪ್ಪ, ಮಾಜಿ ಶಾಸಕ ಅಶೋಕ‌ನಾಯಕ, ಶಿವಮೊಗ್ಗ ಹಾಪ್ ಕಾಮ್ಸ್ ನಿರ್ದೇಶಕ ಆರ್. ವಿಜಯ ಕುಮಾರ್, ಶಿವಮೊಗ್ಗ ವಾಣಿಜ್ಯ ಮಹಾಮಂಡಲ ಅಧ್ಯಕ್ಷ ಗೋಪಿನಾಥ್,
ಕಿಮ್ಮನೆ ಗಾಲ್ಫ್ ರೆಸಾರ್ಟ್ ಸಿಇಒ ರೋನಕ್, ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಂಪನಿಯ ಷರೀಫ್.

ವಾಪಸ್ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಸಚಿವ ಎಂ.ಬಿ.ಪಾಟೀಲ ಜತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಶಾರದಾ ಪೂರ್ಯಾ‌ ನಾಯ್ಕ್, ಭಾರತಿಶೆಟ್ಟಿ, ಅರುಣ್ ಅವರು ಪ್ರಯಾಣಿಸಿದರು.

ಸ್ಥಳದಲ್ಲೇ ಟಿಕೆಟ್‌ ಖರೀದಿಗೆ ಅವಕಾಶ

ವಿಮಾನಯಾನ ಕೂಡ ಸುಲಭವಾಗಿ ಲಭ್ಯವಾಗಬೇಕು ಎನ್ನುವುದು ರಾಜ್ಯ ಸರಕಾರದ ಚಿಂತನೆಯಾಗಿದೆ. ಹೀಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಥಳದಲ್ಲೇ ಟಿಕೆಟ್‌ ಖರೀದಿಗೆ ಅವಕಾಶವಿದ್ದು, ಪ್ರತಿಯೊಬ್ಬ ಪ್ರಯಾಣಿಕರಿಗೂ ಸರಕಾರದ ವತಿಯಿಂದ ಮುಂದಿನ ಒಂದು ವರ್ಷ ಕಾಲ 500 ರೂ. ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಪಾಟೀಲ ವಿವರಿಸಿದರು.

ಇಷ್ಟೇ ಅಲ್ಲದೆ, ಈ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಮೂಲಕವೇ ನಿರ್ವಹಿಸಲಾಗುವುದು. ಇದಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈಗಾಗಲೇ ಅನುಮತಿ ನೀಡಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯದ ಹೊಸ ಮೂಲವೊಂದನ್ನು ಕಂಡುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿಮಾನಸೇವೆ ಲಭ್ಯತೆಯ ವಿವರ

ಇಂಡಿಗೋ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 11.25ಕ್ಕೆ ಹೊರಟು 12.25ಕ್ಕೆ ಬೆಂಗಳೂರನ್ನು ತಲುಪಲಿದೆ. ಅಲ್ಲಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ಹೊರಡಲಿರುವ ಇಂಡಿಗೋ ವಿಮಾನಗಳನ್ನು ಹಿಡಿಯಬಹುದು. ಈ ಸೇವೆಯು ಸೆ.10ರಿಂದ ಲಭ್ಯವಾಗಲಿದೆ. ಇದೇ ರೀತಿಯಲ್ಲಿ ಬೆಂಗಳೂರಿನ ಕಡೆಯಿಂದ ಇದೇ ವಿಮಾನವು ಪ್ರತಿದಿನ ಬೆಳಿಗ್ಗೆ 9.55ಕ್ಕೆ ಹೊರಟು 11.05ಕ್ಕೆ ಶಿವಮೊಗ್ಗದಲ್ಲಿ ಇಳಿಯಲಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.

LEAVE A REPLY

Please enter your comment!
Please enter your name here