ಬೆಂಗಳೂರು;- ಕೆಆರ್‌ಎಸ್ ಒಳಹರಿವು ಶೂನ್ಯಕ್ಕೆ ತಲುಪಿದ್ದು, ನೀರು ಬಿಡುವ ಶಕ್ತಿ ನಮ್ಮಲ್ಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೆಆರ್‌ಎಸ್ ಅಣೆಕಟ್ಟೆಗೆ ಕಾವೇರಿ ನೀರಿನ ಒಳಹರಿವು ಶೂನ್ಯಕ್ಕೆ ತಲುಪಿದೆ. ಕೆಆರ್‌ಎಸ್, ಕಬಿನಿಯಿಂದ ನೈಸರ್ಗಿಕವಾಗಿ 815 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ರಾಜ್ಯದ ಕಾವೇರಿ ಕೊಳ್ಳದಲ್ಲಿ 51 ಟಿಎಂಸಿ ನೀರು ಮಾತ್ರ ಲಭ್ಯವಿದೆ” ಎಂದರು.
ಕುಡಿಯುವ ನೀರು ಉಳಿಸಿಕೊಳ್ಳಬೇಕು. ದೇವರ ಮೊರೆ ಹೋಗೋಣ, ಮಳೆ ಬೀಳಲಿ, ನೀರು ಕೆಳಗಡೆಗೆ ಹರಿಯಲಿ. ಈಗ ನಮ್ಮ ಬಳಿಯಂತೂ ನೀರಿಲ್ಲ. ಕಾವೇರಿ ನೀರಿನ ವಿಚಾರವಾಗಿ 89ನೇ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು, ನ.1 ರಿಂದ ಮುಂದಿನ 15 ದಿನಗಳ ಕಾಲ 2,600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಶಿಫಾರಸು ಮಾಡಿದೆ” ಎಂದು ಹೇಳಿದರು.
ಬಸ್ ಅಗ್ನಿ ದುರಂತದ ಬಗ್ಗೆ ಮಾತನಾಡುತ್ತಾ, “ವೆಲ್ಡಿಂಗ್ ಮಾಡುವಾಗ ಕಿಡಿ ಹಾರಿ ಒಂದು ಬಸ್‌ಗೆ ಬೆಂಕಿ ಬಿದ್ದು, ಹರಡಿಕೊಂಡಿದೆ. ಇಷ್ಟು ದೊಡ್ಡ ಅನಾಹುತ ನಡೆದರೂ ಯಾವುದೇ ಪ್ರಾಣಹಾನಿ ಸಂಭವಿಸದೇ ಇರುವುದು ಒಳ್ಳೆಯ ಸುದ್ದಿ. ಅಗ್ನಿಶಾಮಕ ದಳದವರು ಅತ್ಯಂತ ಶೀಘ್ರವಾಗಿ ಬೆಂಕಿ ನಂದಿಸಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕದಳದ ಉನ್ನತ ಅಧಿಕಾರಿಗಳಿಗೆ ಈ ವಿಚಾರವಾಗಿ ಪ್ರತ್ಯೇಕ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.
ದುರಂತ ನಡೆದ ಸ್ಥಳ ಖಾಸಗಿಯವರಿಗೆ ಸೇರಿದೆ. ಅವರು ಸಹ ಸಣ್ಣ ಪ್ರಮಾಣದ ಅಗ್ನಿ ನಿಯಂತ್ರಣ ವ್ಯವಸ್ಥೆ ಇಟ್ಟುಕೊಂಡಿದ್ದಾರೆ. ಆದರೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದೇನೆ. ಇಂತಹ ಸೂಕ್ಷ್ಮ ಕೆಲಸಗಳು ನಡೆಯುವ ಜಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ” ಎಂದರು.
The post Shivakumar: ತಮಿಳುನಾಡಿಗೆ ನೀರು ಬಿಡುವ ಶಕ್ತಿ ನಮ್ಮಲ್ಲಿಲ್ಲ – ಡಿಕೆ ಶಿವಕುಮಾರ್ appeared first on Ain Live News.