ಶಿವಮೊಗ್ಗ:
ಶಿವಮೊಗ್ಗದ ಎನ್ ಇಎಸ್ ನಲ್ಲಿ ತಮಿಳು ಭಾಷಿಗರ ಸಮಾವೇಶದಲ್ಲಿ ತಮಿಳು ನಾಡಗೀತೆ ಹಾಕಿದ್ದಕ್ಕೆ ಗರಂ ಆದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕನ್ನಡ ನಾಡಗೀತೆ ಹಾಕಿ ಎಂದು ಆಜ್ಞೆ ಹೊರಡಿಸಿ ಪ್ರಸಾರ ಮಾಡಿಸಿದ ಪ್ರಸಂಗ ನಡೆದಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಮಿಳು ಭಾಷಿಗ ಮತದಾರರ ಮೇಲೆ ಕಣ್ಣೀರಿಟ್ಟಿರುವ ಬಿಜೆಪಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ತಮಿಳು ಮತದಾರರನ್ನು ಸೆಳೆಯಲು ಮುಂದಾಯಿತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಎನ್ಇಎಸ್ ನಲ್ಲಿ ತಮಿಳು ಭಾಷಿಗರ ಸಮಾವೇಶ ಆಯೋಜನೆ ಮಾಡಲಾಗಿತ್ತು. ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ತಮಿಳು ನಾಡಗೀತೆ ಹಾಕಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಈಶ್ವರಪ್ಪ ಅವರು ತಮಿಳು ನಾಡಗೀತೆಯನ್ನು ನಿಲ್ಲಿಸಿದ್ದಾರೆ. ಆ ಬಳಿಕ ಕಾರ್ಯಕ್ರಮದಲ್ಲಿದ್ದ ಜನರಿಗೆ ನಾಡಗೀತೆ ಹಾಡಲು ಅವಕಾಶ ನೀಡಿದ್ದರು. ಆದರೆ ಯಾರು ನಾಡಗೀತೆ ಹಾಡಲು ಮುಂದಾಗದ ಕಾರಣ, ಕನ್ನಡ ನಾಡಗೀತೆಯನ್ನೇ ಹಾಕಿಸಿದ್ದಾರೆ.
ತಮಿಳುನಾಡಿನಲ್ಲಿ ನಾಲ್ಕು ಬಿಜೆಪಿ ಶಾಸಕರು ಆಗಲು ಅಣ್ಣಾಮಲೈ ಕಾರಣ: ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ರೌಡಿಗಳಿಗೆ ಅಣ್ಣಾಮಲೈ ಸಿಂಹಸ್ವಪ್ನ ಆಗಿದ್ದವರು. ಹೀಗಾಗಿ ಅವರನ್ನು ಕರ್ನಾಟಕದ ಸಿಂಗಂ ಅಂತಾರೆ, ಅಂತಹ ಸಿಂಹ ಇವತ್ತು ಚನ್ನಬಸಪ್ಪ ಅವರನ್ನು ಗೆಲ್ಲಿಸಲು ಬಂದಿದ್ದಾರೆ.
ಕರ್ನಾಟಕ, ತಮಿಳುನಾಡಿನ ಪ್ರೀತಿಪಾತ್ರರು ಅಣ್ಣಾಮಲೈ, ಅವರಂತೆ ಇರಬೇಕು ಅಂತ ಅಧಿಕಾರಿಗಳು ಬಯಸುತ್ತಾರೆ. ಒಂದೂ ಕ್ಷೇತ್ರ ಇಲ್ಲದ ತಮಿಳುನಾಡಿನಲ್ಲಿ ನಾಲ್ಕು ಬಿಜೆಪಿ ಶಾಸಕರು ಆಗಲು ಅಣ್ಣಾಮಲೈ ಕಾರಣ, ಇದು ಕನ್ನಡ-ತಮಿಳು ಸಂಗಮ. ಅರ್ಧ ಭಾರತ ಇಲ್ಲಿ ಕಾಣುತ್ತಿದೆ. ಬಿಜೆಪಿ ಗೆಲ್ಲಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದು ಕರೆ ನೀಡಿದರು.
ಚನ್ನಬಸಪ್ಪ ಗೆದ್ದರೆ ನಾನೇ ಗೆದ್ದಂತೆ: ಚನ್ನಬಸಪ್ಪ ಗೆದ್ದರೆ ನಾನೇ ಗೆದ್ದಂತೆ. ಅದಕ್ಕಾಗಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಬೆಳಗ್ಗೆ ನರೇಂದ್ರ ಮೋದಿಯವರು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ನನಗೆ 46,000 ಮತಗಳಿಂದ ಗೆಲ್ಲಿಸಿದ್ದಾರೆ. ಈ ಬಾರಿ ಬಿಜೆಪಿಯನ್ನು 60 ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಅಣ್ಣಾಮಲೈ, ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಈಶ್ವರಪ್ಪ 50 ವರ್ಷ ಕೆಲಸ ಮಾಡಿದ್ದಾರೆ. ನನಗೆ ಅಂತಹ ಜವಾಬ್ದಾರಿ ನನಗೆ ತಮಿಳುನಾಡಿನಲ್ಲಿ ಸಿಕ್ಕಿದೆ. ಹೀಗಾಗಿ ಅವರ ಮೇಲೆ ನನಗೆ ಪ್ರೀತಿ. ಅವರೊಬ್ಬ ಎಲ್ಲರಿಗೂ ಮಾದರಿಯಾಗಿ ಪಕ್ಷದ ಭೀಷ್ಮ ಪಿತಾಮಹ ಆಗಿದ್ದಾರೆ. ಎರಡೂ ರಾಜ್ಯಗಳು ರಾಮಸೇತುವಾಗಿ ಸಂಪರ್ಕದಲ್ಲಿದೆ. ಈಶ್ವರಪ್ಪ ಸದಾ ಮಧುರೈ ದೇಗುಲಕ್ಕೆ ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಓಂಶಕ್ತಿ ದೇಗುಲಕ್ಕೆ ಭಕ್ತರನ್ನು ಕಳಿಸುವ ಕೆಲಸ ಮಾಡುತ್ತಿದ್ದಾರೆ.
ಸದ್ಯದಲ್ಲಿಯೇ ಈಶ್ವರಪ್ಪ ಅವರಿಗೆ ಬಿಜೆಪಿಯಲ್ಲಿ ದೊಡ್ಡ ಹುದ್ದೆ ಸಿಗಲಿದೆ, ಬಿಜೆಪಿ ಹೈಕಮಾಂಡ್ ದೊಡ್ಡ ಹುದ್ದೆ ನೀಡಿ ಅವರನ್ನು ಗೌರವಿಸಲಿದೆ ಎಂದು ನನಗೆ ಅನಿಸುತ್ತದೆ ಎಂದು ಅಣ್ಣಾಮಲೈ ಹೇಳಿದರು.