ಲೋಕಾಯುಕ್ತ ಬಲೆ: ಲಂಚ ಸ್ವೀಕಾರ ಪ್ರಕರಣದಲ್ಲಿ ಶಿವಮೊಗ್ಗ ಅಧಿಕಾರಿ ದೋಷಿ, 2 ವರ್ಷ ಜೈಲು ಶಿಕ್ಷೆ
ಬೆಂಗಳೂರು: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಶಿವಮೊಗ್ಗದ ಸರ್ಕಾರಿ ಅಧಿಕಾರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಶಿವಮೊಗ್ಗದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಆರ್.ಎಸ್. ಪರಮೇಶ್ವರಪ್ಪ ಅವರು ₹10,000 ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ದೋಷಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸಗುಂದ ಗ್ರಾಮದ ನಿವಾಸಿ ಹೆಚ್.ಎಸ್. ಜನಾರ್ಧನ ಅವರು 2015-16ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯಲ್ಲಿ ಆಯ್ಕೆಯಾದ ಬಳಿಕ, ಕೊಳವೆಬಾವಿ ಕಾಮಗಾರಿ ಮಾಡಲು ಸಹಾಯ ಮಾಡುವ ಹೆಸರಿನಲ್ಲಿ ಆರೋಪಿಯು ಲಂಚದ ಬೇಡಿಕೆ ಇಟ್ಟಿದ್ದಾನೆ ಎಂದು ಪಿರ್ಯಾದಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 2017 ಜುಲೈ 13ರಂದು ಆರೋಪಿಯು ಕಚೇರಿಯಲ್ಲಿ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಬಂಧಿಸಿದ್ದರು.
ಪ್ರಕರಣದ ತನಿಖೆಯನ್ನು ಪೊಲೀಸ್ ಉಪಾಧೀಕ್ಷಕ ಎ. ಚಂದ್ರಪ್ಪ ಅವರು ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ್ ಅವರು 2026 ಏಪ್ರಿಲ್ 2ರಂದು ತೀರ್ಪು ನೀಡಿ, ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ₹40,000 ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ.ಡಿ. ಸುಂದರ್ ರಾಜ್ ವಾದ ಮಂಡಿಸಿದರು.
ಈ ತೀರ್ಪು ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ದಿಕ್ಕಿನಲ್ಲಿ ಮಹತ್ವದ ಸಂದೇಶವಾಗಿ ಪರಿಗಣಿಸಲಾಗುತ್ತಿದೆ.
