ಶಿವಮೊಗ್ಗ: ಸಿಇಟಿ ಪರೀಕ್ಷೆ ಬರೆಯಲು ಕೇಂದ್ರದೊಳಗೆ ತೆರಳುವಾಗ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಶಿದಾರ ತೆಗೆಸಿದರೆನ್ನಲಾದ ಘಟನೆಗೆ ಸಂಬಂಧಿಸಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ವಿರುದ್ಧ ನಗರದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಇಟಿ ಪರೀಕ್ಷಾ ಕೇಂದ್ರದೊಳಗೆ ಬ್ರಾಹ್ಮಣ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿ ಪ್ರವೇಶಾವಕಾಶ ನೀಡಿದ್ದು ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಪರೀಕ್ಷೆ ಬರೆಯಲು ತೆರಳಿದ್ದ ಸಮುದಾಯ ವಿದ್ಯಾರ್ಥಿಗಳಿಗೆ ದೈಹಿಕ ತಪಾಸಣೆ ಮಾಡುವ ಸೋಗಿನಲ್ಲಿ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಭಾವನೆ ಹೊಂದಿದ್ದ ಉಪನಿತರಾಗಿ ಧರಿಸಿದ್ದ ಯಜ್ಞೋಪವೀತವನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ಹಾಗೂ ವಿದ್ಯಾರ್ಥಿಗಳ ಇಚ್ಚೆಗೆ ವಿರುದ್ದವಾಗಿ ಕತ್ತರಿಸಲು ಸೂಚಿಸಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ಯಜ್ಞೋಪವೀತವನ್ನು ಕತ್ತರಿಸಲು ಸೂಚಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ದೂರಿನ ಆಧಾರದ ಮೇಲೆ ಅಧಿಕಾರಿಯ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.