ನವದೆಹಲಿ: ದಕ್ಷಿಣ ಕೊರಿಯಾದಲ್ಲಿ (South Korea) ಗಂಡ-ಹೆಂಡತಿ ತಮ್ಮ ಮೃತ ಶಿಶುವಿನ ದೇಹವನ್ನು ಪ್ಲಾಸ್ಟಿಕ್ ಬಾಟಲಿಯೊಳಗೆ ಇಟ್ಟು 3 ವರ್ಷದಿಂದ ಶೇಖರಿಸಿಟ್ಟ ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ದಕ್ಷಿಣ ಕೊರಿಯಾದ ಜಿಯೊಂಗ್ಗಿ ಪ್ರಾಂತ್ಯದ ಪೊಚಿಯಾನ್ ನಗರದಲ್ಲಿ 3 ವರ್ಷಗಳಿಂದ ತಮ್ಮ ಮಗುವಿನ ದೇಹವನ್ನು ಕಂಟೇನರ್‌ನಲ್ಲಿ ಇಟ್ಟಿದ್ದ ದಂಪತಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ತಮ್ಮ ಪುಟ್ಟ ಮಗಳನ್ನು ಪ್ಲಾಸ್ಟಿಕ್ ಕಿಮ್ಚಿ ಕಂಟೈನರ್‌ನಲ್ಲಿ ಬಚ್ಚಿಟ್ಟ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಕೊರಿಯಾ ಹೆರಾಲ್ಡ್ ವರದಿ ಮಾಡಿದ್ದು, ದಂಪತಿ 3 ವರ್ಷದ ಹಿಂದೆ ಸಾವನ್ನಪ್ಪಿದ ತಮ್ಮ 15 ತಿಂಗಳ ಮಗಳನ್ನು ಆ ಪ್ಲಾಸ್ಟಿಕ್ ಕಂಟೈನರ್‌ನಲ್ಲಿ ಹಾಕಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಆ ಮಗುವನ್ನು ಪೋಷಕರೇ ಕೊಂದಿರುವ ಅನುಮಾನವೂ ವ್ಯಕ್ತವಾಗಿದೆ. ಆದರೆ, ಆ ಮಗುವಿನ ತಾಯಿ ತಾನು ಮಗುವನ್ನು ಕೊಂದಿಲ್ಲ ಎಂದು ವಾದಿಸಿದ್ದಾರೆ. ಮಗು ಎಲ್ಲಿ ಹೋಯಿತೆಂದು ಕೇಳಿದಾಗ ತಾನು ಆ ಮಗುವನ್ನು ರಸ್ತೆಯಲ್ಲಿ ಬಿಟ್ಟು ಬಂದಿದ್ದೆ ಎಂದು ಸುಳ್ಳು ಹೇಳಿದ್ದರು.
ಇದನ್ನೂ ಓದಿ: Shocking News: ರಾಜಸ್ಥಾನ- ಪಾಕಿಸ್ತಾನದ ಗಡಿಯಲ್ಲಿ ಮಾತು ಬಾರದ, ಕಿವಿ ಕೇಳದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಕೊನೆಗೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ಪ್ರಶ್ನಿಸಿದಾಗ ತಾನು ಮತ್ತು ತನ್ನ ಪತಿ ಮಗುವಿನ ಶವವನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಬಚ್ಚಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಮಗುವಿನ ಮೃತದೇಹವನ್ನು ಮರೆಮಾಚಲು ದಂಪತಿಗಳು ಬಳಸಿದ್ದ ಕಂಟೈನರ್ ಕೇವಲ 35 ಸೆಂಟಿಮೀಟರ್ ಉದ್ದ, 24 ಸೆಂಟಿಮೀಟರ್ ಅಗಲ ಮತ್ತು 17 ಸೆಂಟಿಮೀಟರ್ ಎತ್ತರವಿತ್ತು.
ಮೃತ ಪಟ್ಟ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲ, ಅದನ್ನು ಎಲ್ಕೆಜಿಗೂ ಸೇರಿಸಿರಲಿಲ್ಲ ಎಂದು ಪೊಲೀಸರಿಗೆ ತಿಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲಿಯವರೆಗೂ ಶಿಶುವಿನ ಸಾವು ಯಾರ ಗಮನಕ್ಕೂ ಬಂದಿರಲಿಲ್ಲ. ಮಕ್ಕಳ ಕಲ್ಯಾಣ ಕಾನೂನುಗಳನ್ನು ಉಲ್ಲಂಘಿಸಿದ ಶಂಕೆಯ ಮೇಲೆ ಮಗುವಿನ ತಾಯಿಯ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆಗ ಈ ವಿಚಾರ ಗೊತ್ತಾಗಿದೆ. ಮನೆಯನ್ನು ಪರಿಶೀಲಿಸಿದಾಗ ಪ್ಲಾಸ್ಟಿಕ್ ಬಾಟಲಿಯಲ್ಲಿ ಮಗುವಿನ ಶವವನ್ನು ಇಟ್ಟು, ಮೇಲ್ಛಾವಣಿಯಲ್ಲಿ ಬಚ್ಚಿಟ್ಟಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.