ಬೆಂಗಳೂರು: ರಾಜ್ಯದಾದ್ಯಂತ ಸಾವಿರಾರು ಸಣ್ಣ ಅಂಗಡಿ ಮಾಲೀಕರಿಗೆ ಕಮರ್ಶಿಯಲ್ ಟ್ಯಾಕ್ಸ್ ಇಲಾಖೆ ಆಶ್ಚರ್ಯಕಾರಿ ನೋಟೀಸನ್ನು ರವಾನಿಸಿದೆ. ಗೂಗಲ್ ಪೇ, ಫೋನ್ ಪೇ ಮುಂತಾದ ಯುಪಿಐ ಪ್ಲಾಟ್‌ಫಾರ್ಮ್‌ಗಳ ಮೂಲಕ ಗ್ರಾಹಕರಿಂದ ಹಣ ಸ್ವೀಕರಿಸಿದ ಹಿನ್ನಲೆಯಲ್ಲಿ, ಲಕ್ಷಾಂತರ ರೂಪಾಯಿ ತೆರಿಗೆಯು ಬಾಕಿ ಇದೆ ಎಂದು ನೋಟೀಸ್ ನೀಡಲಾಗಿದೆ.
ಟಿ ಸ್ಟಾಲ್, ಜ್ಯೂಸ್ ಸೆಂಟರ್, ಬೇಕರಿ, ಬನ್-ಸಮೋಸಾ ಅಂಗಡಿಗಳು ಸೇರಿದಂತೆ ಹಲವು ಸಣ್ಣ ವ್ಯಾಪಾರಿಗಳಿಗೆ ₹32 ಲಕ್ಷದಿಂದ ₹54 ಲಕ್ಷವರೆಗೆ ನೋಟೀಸು ಬಂದಿದೆ. 2021ರಿಂದ ಜಿಎಸ್ಟಿ ಪಾವತಿಸಿಲ್ಲ ಎಂಬ ಆಧಾರದ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ಇಲಾಖೆ ಉಲ್ಲೇಖಿಸಿದೆ.
ಒಬ್ಬ ಬೇಕರಿ ಮಾಲೀಕ ಹೇಳುವಂತೆ, “ನಾವು ಪ್ರತಿದಿನ ₹10,000-₹15,000 ವ್ಯಾಪಾರ ಮಾಡ್ತೀವಿ. ಅದ್ರಲ್ಲಿ 99% ಪಾವತಿ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ. ಈಗ ₹39 ಲಕ್ಷ ತೆರಿಗೆ ಪಾವತಿಸೋದು ಹೇಗೆ ಸಾಧ್ಯ?”
ಈ ಹಿಂದೆ ಯಾವುದೂ ಎಚ್ಚರಿಕೆ ನೀಡದೆ ನೇರವಾಗಿ ಜಿಎಸ್ಟಿ ಬಾಕಿ ಇದೆ ಎಂದು ಹೇಳಿ ನೋಟೀಸು ಕಳಿಸಲಾಗಿರುವುದು ವ್ಯಾಪಾರಿಗಳಿಗೆ ಆತಂಕ ಉಂಟುಮಾಡಿದೆ. “₹1 ಮ್ಯಾಚ್‌ಬಾಕ್ಸ್ ತಗೊಂಡರೂ ಫೋನ್ ಪೇ ಮಾಡ್ತಾರೆ. ನಮಗೆ ಈ ವ್ಯವಹಾರಗಳ ಮೇಲೆ ಟ್ಯಾಕ್ಸ್ ಬರಬಹುದು ಎಂಬದೇ ಗೊತ್ತಿರಲಿಲ್ಲ,” ಎಂದು ಮತ್ತೊಬ್ಬ ಅಂಗಡಿ ಮಾಲೀಕ ದುಃಖವ್ಯಕ್ತಪಡಿಸಿದರು.
ಕಳೆದ ಹತ್ತು ದಿನಗಳಲ್ಲಿ ರಾಜ್ಯದಾದ್ಯಂತ ನೂರಾರು ಸಣ್ಣ ವ್ಯಾಪಾರಿಗಳಿಗೆ ಈ ರೀತಿ ನೋಟೀಸ್ ನೀಡಲಾಗಿದೆ. ಯಾವ ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಎಷ್ಟು ಹಣ ಟ್ರಾನ್ಸಾಕ್ಷನ್ ಆಗಿದೆ ಎಂಬ ಲೆಕ್ಕದ ಆಧಾರದ ಮೇಲೆ ನೋಟೀಸ್ ಬರೆದಿದ್ದಾರೆ. ಹಣ ಪಾವತಿಸದಿದ್ದರೆ ಬಡ್ಡಿ ವಸೂಲಿಸಲಾಗುವುದು ಎಂದೂ ಎಚ್ಚರಿಸಲಾಗಿದೆ.
ಡಿಜಿಟಲ್ ಇಂಡಿಯಾ ಅಭಿಯಾನದಡಿ ಪಾವತಿಗಳಿಗೆ ಸ್ಕ್ಯಾನರ್ ಅಳವಡಿಸಿ ನಗದು ವ್ಯವಹಾರ ತೊರೆದು ಪೂರ್ತಿ ಡಿಜಿಟಲ್ ಆಗಿರುವುದಕ್ಕೆ ಮಾಲೀಕರು ಈಗ ಪಶ್ಚಾತ್ತಾಪಪಡುತ್ತಿದ್ದಾರೆ. “ಒಂದು ಕಾಲದಲ್ಲಿ ನಗದು ತೆಗೆದುಕೊಳ್ಳಬೇಡಿ ಎಂದವರು, ಈಗ ಪಾವತಿಗೆ ನೋಟಿಸ್ ಕಳಿಸುತ್ತಿದ್ದಾರೆ,” ಎಂಬ ಅಸಮಾಧಾನ ಕೂಡ ಮಾಲೀಕರಿಂದ ಕೇಳಿಬರುತ್ತಿದೆ.
ವ್ಯಾಪಾರಿಗಳು ಈಗ ಸರ್ಕಾರಕ್ಕೆ ವಿನಂತಿಸುತ್ತಿದ್ದಾರೆ: ಟ್ಯಾಕ್ಸ್ ಅರಿವು ಇಲ್ಲದ ಕಾರಣ ಈ ಬಾಕಿಗಳನ್ನು ರದ್ದು ಮಾಡಬೇಕು ಅಥವಾ ಗಡಿವೇಳೆಯೊಂದಿಗೆ ತಯಾರಿ ಸಮಯ ನೀಡಬೇಕು. ಜೊತೆಗೆ ಜನರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ಹಾಗೂ ಡಿಜಿಟಲ್ ಪಾವತಿ ನಿಯಮಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.