ಹಾಸನ:
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ(ಎನ್‌ಐಸಿಯು) ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಕನಿಷ್ಠ 24 ನವಜಾತ ಶಿಶುಗಳನ್ನು ರಕ್ಷಿಸಿ ಪಕ್ಕದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಇಡೀ ವಾರ್ಡ್ ಹೊಗೆಯಿಂದ ಆವೃತವಾಗಿತ್ತು. ಎನ್‌ಐಸಿಯುನಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾದ ನಂತರ ಆಸ್ಪತ್ರೆಯ ಸಿಬ್ಬಂದಿ ಮತ್ತು ಪೋಷಕರು ಭಯಭೀತರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ತಿಳಿದ ನರ್ಸ್ ಒಬ್ಬರು MCB ಸ್ವಿಚ್ ಆಫ್ ಮಾಡಿ ವೈದ್ಯರು ಮತ್ತು ವೈದ್ಯಕೀಯ ಅಧೀಕ್ಷಕರಿಗೆ ತಿಳಿಸಿದರು. ಡ್ಯೂಟಿ ನರ್ಸ್‌ಗಳು ಮತ್ತು ಸಿಬ್ಬಂದಿ ಪೋಷಕರ ಸಹಾಯದಿಂದ ಶಿಶುಗಳನ್ನು ರಕ್ಷಿಸಿ ಎಲ್ಲಾ ಶಿಶುಗಳನ್ನು ಪಕ್ಕದ ವಾರ್ಡ್‌ಗೆ ಸ್ಥಳಾಂತರಿಸಿದ್ದಾರೆ. ಎಲ್ಲಾ ನವಜಾತ ಶಿಶುಗಳು ಸುರಕ್ಷಿತ ಮತ್ತು ಆರೋಗ್ಯಕರವಾಗಿವೆ. ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡ ಆಸ್ಪತ್ರೆಗೆ ಧಾವಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್ ಭೇಟಿ ನೀಡಿದ್ದರು. ಶಾರ್ಟ್ ಸರ್ಕ್ಯೂಟ್‌ಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ಗೆ ಕಾರಣಗಳನ್ನು ಕಂಡುಹಿಡಿಯಲು ಎಲೆಕ್ಟ್ರಿಷಿಯನ್ ಮತ್ತು ವಿದ್ಯುತ್ ಗುತ್ತಿಗೆದಾರರನ್ನು ಕರೆಯಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ ತಿಳಿಸಿದ್ದಾರೆ. ಸಮಸ್ಯೆ ನಿವಾರಣೆಗೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದರು.