Home Uncategorized Shraddha Murder Case: ಶ್ರದ್ಧಾ ಕೊಲೆ ಪ್ರಕರಣ; ಆರೋಪಿ ಅಫ್ತಾಬ್ ಮಂಪರು ಪರೀಕ್ಷೆ ಮುಕ್ತಾಯ

Shraddha Murder Case: ಶ್ರದ್ಧಾ ಕೊಲೆ ಪ್ರಕರಣ; ಆರೋಪಿ ಅಫ್ತಾಬ್ ಮಂಪರು ಪರೀಕ್ಷೆ ಮುಕ್ತಾಯ

28
0

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ (Shraddha Walkar Murder Case)  ಸಂಬಂಧಿಸಿದಂತೆ ಆರೋಪಿ ಅಫ್ತಾಬ್​ನ ಮಂಪರು ಪರೀಕ್ಷೆ (Narco Test) ಮುಕ್ತಾಯವಾಗಿದೆ. ಅಫ್ತಾಬ್​ನನ್ನು ವೈದ್ಯರು ನಿಗಾದಲ್ಲಿ ಇರಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮಂಪರು ಪರೀಕ್ಷೆ ನಡೆದಿದೆ. ಡಾ. ನವೀನ್ ಕುಮಾರ್ ನೇತೃತ್ವದಲ್ಲಿ 7 ವೈದ್ಯರ ತಂಡ ಮಂಪರು ಪರೀಕ್ಷೆ ನಡೆಸಿದೆ. ಆತನನ್ನು ಪೊಲೀಸರು ತಿಹಾರ್ ಜೈಲಿಗೆ ಕರೆದೊಯ್ಯಲಿದ್ದಾರೆ.

ತನ್ನ ಗೆಳತಿಯನ್ನು ಬರ್ಬರವಾಗಿ ಕೊಂದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪಿ ಅಫ್ತಾಬ್ ಪೂನಾವಾಲಾಗೆ ಇಂದು ನಾರ್ಕೋ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯ ನಂತರ, ಆರೋಪಿಯನ್ನು ತಿಹಾರ್ ಜೈಲಿನಿಂದ ರೋಹಿಣಿಯಲ್ಲಿರುವ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ. ದೆಹಲಿ ಪೊಲೀಸ್ ಭದ್ರತೆಯ 3ನೇ ಬೆಟಾಲಿಯನ್ ಅಡಿಯಲ್ಲಿ ಜೈಲು ವ್ಯಾನ್‌ನಲ್ಲಿ ಅಫ್ತಾಬ್ ಪೂನಾವಾಲಾ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬುಧವಾರ ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ನಡೆಸಿದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಪೂನಾವಾಲಾ ಅಪರಾಧ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಶ್ರದ್ಧಾ ವಾಕರ್‌ಳನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಹಲವು ಪ್ರದೇಶಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Crime News: ಶ್ರದ್ಧಾಳಂತೆ ಮತ್ತೊಂದು ಬರ್ಬರ ಹತ್ಯೆ, ಮಗನ ಜತೆ ಸೇರಿ ಪತಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟ ಪತ್ನಿ

28 ವರ್ಷದ ಅಫ್ತಾಬ್ ಪೂನಾವಾಲಾ ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ತಮ್ಮ ಬಾಡಿಗೆ ನಿವಾಸದಲ್ಲಿ ಶ್ರದ್ಧಾ ವಾಕರ್‌ ಎಂಬ ಯುವತಿಯನ್ನು ಕೊಂದಿದ್ದ. ಶ್ರದ್ಧಾಳನ್ನು ಕೊಂದ ಬಳಿಕ ಅಫ್ತಾಬ್ ಆಕೆಯ ದೇಹದ ಭಾಗಗಳನ್ನು 35 ಭಾಗ ಮಾಡಿ, 18 ದಿನಗಳ ಕಾಲ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಶೆಫ್ ಆಗಿದ್ದ ಅಫ್ತಾಬ್ ಫುಡ್ ಬ್ಲಾಗ್ ಕೂಡ ನಡೆಸುತ್ತಿದ್ದ. ಶ್ರದ್ಧಾಳನ್ನು ಕೊಂದ ಬಳಿಕ ಆಕೆಯ ದೇಹವನ್ನು ತುಂಡು ಮಾಡಲು ಒಂದೂವರೆ ಅಡಿ ಉದ್ದದ ದೊಡ್ಡ ಚಾಕುವನ್ನು ತೆಗೆದುಕೊಂಡು ಬಂದಿದ್ದ. ಬಳಿಕ ಆ ಹೆಣದ ಪೀಸ್​ಗಳನ್ನು ಫ್ರಿಡ್ಜ್​ನಲ್ಲಿ ಇರಿಸಿದ್ದ. ಅದಕ್ಕೆಂದೇ 300 ಲೀಟರ್​ನ ಹೊಸ ಫ್ರಿಡ್ಜ್​ ಕೂಡ ಖರೀದಿಸಿದ್ದ.

ಡೇಟಿಂಗ್ ಆ್ಯಪ್​ನಲ್ಲಿ ಶ್ರದ್ಧಾಳಿಗೆ ಪರಿಚಯವಾಗಿದ್ದ ಅಫ್ತಾಬ್ ಇದಕ್ಕೂ ಮೊದಲು ಹಲವು ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ, ಆತನ ಮೇಲೆ ಅನುಮಾನಗೊಂಡು ತನ್ನನ್ನು ಮದುವೆಯಾಗೆಂದು ಶ್ರದ್ಧಾ ಒತ್ತಾಯಿಸುತ್ತಿದ್ದಳು. ಆದರೆ, ಅದಕ್ಕೆ ಅಫ್ತಾಬ್ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದು ಕಳೆದ ಮೇ ತಿಂಗಳಲ್ಲಿ ಅಫ್ತಾಬ್​ ಶ್ರದ್ಧಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮಾಡಿದ ರಾತ್ರಿ ಕುಳಿತು ಅಮೇರಿಕನ್ ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್​ ಡೆಕ್ಸ್ಟರ್ ಸೇರಿದಂತೆ ಅನೇಕ ಕ್ರೈಂ ಸಿನಿಮಾಗಳನ್ನು ನೋಡಿದ್ದ ಅಫ್ತಾಬ್​ ಶ್ರದ್ಧಾಳ ದೇಹವನ್ನು ಹಾಗೇ ಬಿಸಾಡುವ ಬದಲು ಸಣ್ಣ ತುಂಡುಗಳಾಗಿ ಕೊಚ್ಚಿ ಬಿಸಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ನಿರ್ಧರಿಸಿದ್ದ.

ಇದನ್ನೂ ಓದಿ: ಶ್ರದ್ಧಾಳನ್ನು ಹತ್ಯೆ ಮಾಡಿರುವುದಾಗಿ ಪಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಅಫ್ತಾಬ್ ಪೂನಾವಾಲಾ

ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು ಕೊಂದ ನಂತರ ಆಕೆಯ ಶವವನ್ನು ಇಟ್ಟುಕೊಂಡು ಅದೇ ರೂಮಿನಲ್ಲಿ ಒಂದು ದಿನವನ್ನು ಕಳೆದಿದ್ದ. ಮಾರನೇ ದಿನ ಹೊಸ ಫ್ರಿಡ್ಜ್ ಖರೀದಿಸಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಆ ಫ್ರಿಡ್ಜ್​ನಲ್ಲಿ ಇರಿಸಿದ್ದ. ನಂತರ 18 ದಿನಗಳವರೆಗೆ ಪ್ರತಿ ರಾತ್ರಿ 12 ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಿ, ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಆಕೆಯ ದೇಹದ ಒಂದೊಂದೇ ಭಾಗಗಳನ್ನು ಬಿಸಾಡಿ ಬರುತ್ತಿದ್ದ. 18 ದಿನಗಳ ಕಾಲ ಶವದ ತುಂಡುಗಳನ್ನು ಫ್ರಿಡ್ಜ್​ನಲ್ಲಿ ಇಟ್ಟಿದ್ದರಿಂದ ಮತ್ತು ಮನೆಯಲ್ಲಿ ಸ್ವಲ್ಪ ರಕ್ತದ ವಾಸನೆ ಹಾಗೇ ಉಳಿದಿದ್ದರಿಂದ ಮನೆಯ ವಾಸನೆಯನ್ನು ಕಡಿಮೆ ಮಾಡಲು ರೂಂ ಫ್ರೆಷನರ್​ಗಳನ್ನು ತಂದಿದ್ದ. ಹಾಗೇ, ದಿನವೂ ಊದುಬತ್ತಿ ಹೊತ್ತಿಸಿ ಇಡುತ್ತಿದ್ದ.

ಕೊಲೆ ವಿಷಯ ಬಯಲಾಗಿದ್ದು ಹೇಗೆ?:

ಮಹಾರಾಷ್ಟ್ರದ ಪಾಲ್ಘರ್ ನಿವಾಸಿಯಾದ ಶ್ರದ್ಧಾಳ ತಂದೆ ವಿಕಾಸ್ ಮದನ್ ವಾಕರ್ ನವೆಂಬರ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳು ಮೇ ತಿಂಗಳಿಂದ ನಾಪತ್ತೆಯಾಗಿದ್ದಾಳೆ, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರು ನೀಡಿದ್ದರು. ಅದರ ಬೆನ್ನತ್ತಿ ತನಿಖೆ ಮಾಡಲಾರಂಭಿಸಿದ ಪೊಲೀಸರಿಗೆ ನಿಗೂಢ ಕೊಲೆಯ ಸುಳಿವು ಸಿಕ್ಕಿತ್ತು. ಆರಂಭಿಕ ತನಿಖೆಯಲ್ಲಿ ಶ್ರದ್ಧಾಳ ಮೊಬೈಲ್ ಕೊನೆಯ ಬಾರಿ ಎಲ್ಲಿ ಸಿಗ್ನಲ್ ಸಿಕ್ಕಿದೆ ಎಂಬುದು ಪತ್ತೆಯಾಗಿತ್ತು.  ಆ ತನಿಖೆಯ ಸಂದರ್ಭದಲ್ಲಿ ಅಫ್ತಾಬ್ ಮತ್ತು ಶ್ರದ್ಧಾ ದೆಹಲಿಗೆ ಬಂದು ಛತ್ತರ್‌ಪುರ ಪಹಾಡಿ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್​ಮೆಂಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಗೊತ್ತಾಗಿತ್ತು. ಅಲ್ಲಿ ಹೋಗಿ ಅಫ್ತಾಬ್​ನನ್ನು ವಿಚಾರಣೆ ಮಾಡಿದಾಗ ಆತ ಶ್ರದ್ಧಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಮೇ ತಿಂಗಳಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here