ಬೆಂಗಳೂರು:
ಕಳೆದ 12 ವರ್ಷಗಳಿಂದ ವಿಶ್ವಾದ್ಯಂತ ಯೋಗವನ್ನ ಪ್ರಚಾರ ಮಾಡುತ್ತಿರುವ “ಶ್ವಾಸ ಯೋಗ ಸಂಸ್ಥೆಯು” ಜೂ.20ರಂದು ಯೋಗ ಹಾಗೂ ಯೋಗಭ್ಯಾಸದಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಯೋಗ ರತ್ನ-2023’ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಖ್ಯಾತ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಜೂನ್ 20 ರಂದು ಸಂಜೆ 4 ಗಂಟೆಗೆ ಜಯ ಮಹಲ್ ಮುಖ್ಯ ರಸ್ತೆಯ ‘ಚಾಮರ ವಜ್ರ’ದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೃಷಿಕೇಶದ ಸ್ವಾಮಿ ರಾಮಸಾಧಕ ಗ್ರಾಮ ಆಶ್ರಮದ ಅಹಿಂಸಿನ್ ಸಂಸ್ಥೆ, ಇಂಡೋನೇಷಿಯಾದ ಗಾಂಧಿ ಆಶ್ರಮ, ಬಾಲಿಯ ಅಗಸ್ ಇಂದ್ರ ಉದಯನ್, ಚೀನಾದ ಬೀಜಿಂಗ್‌ನ ಯೋಗಿಯೋಗ ಸಂಸ್ಥೆಯ ಮನಮೋಹನ ಸಿಂಗ್ ಭಂಡಾರಿ, ಅರ್ಜೆಂಟೀನಾದ ಶ್ವಾಸಯೋಗಿ ವಿಕ್ಟರ್ ಟ್ರುವಿಯಾನೋ ಹಾಗೂ ಗುಳೇದಗುಡ್ಡದ ಶ್ರೀ ಕೃಷ್ಣ ಯೋಗಾಶ್ರಮದ ಗುರೂಜಿ ಬಸವರಾಜ ಹಡಗಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣೆಯಲ್ಲಿ 2023ನೇ ಸಾಲಿನ ಯೋಗರತ್ನ – ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀಗಳ ಅಡಿಗಳಿಗೆ ಸಮರ್ಪಿಸುತ್ತಿದ್ದೇವೆ ಎಂದು ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಯೋಗರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ನಾಡಿನ ಪ್ರಮುಖ ಮಠಾಧಿಪತಿಗಳ ಸಮ್ಮುಖದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸಚಿವರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಕೆ. ಗೋವಿಂದರಾಜ್, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಂಕರ ಪಾಟೀಲ್ ಮುನೇನಕೊಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ‘ಶ್ವಾಸಗುರು ಹಿಮಾಲಯದ ಯೋಗಿಗಳ ಸನ್ನಿಧಿಯಲ್ಲಿ’ ಎಂಬ ಶೀರ್ಷಿಕೆಯ ವಚನಾನಂದಶ್ರೀಗಳ ಜೀವನಾಧಾರಿತ ಕೃತಿ ಬಿಡುಗಡೆಯಾಗಲಿದೆ