ಈ ಬಜೆಟ್ ಮೂಲಕ ಸಿದ್ದರಾಮಯ್ಯ ರಾಜ್ಯದ ವಿನಾಶಕ್ಕೆ ಬುನಾದಿ ಹಾಕಿದ್ದಾರೆ
ಬಿಜೆಪಿ ಬಜೆಟ್ ವೇಳೆ ಸಿದ್ದರಾಮಯ್ಯ ಕಿವಿಗೆ ಹೂವು ಇಟ್ಟುಕೊಂಡಿದ್ದರು; ಈಗ 7 ಕೋಟಿ ಕನ್ನಡಿಗರ ಕಿವಿಗೆ ಹೂವು ಇಟ್ಟಿದ್ದಾರೆ!!
ಬೆಂಗಳೂರು: ಇದು ಡಿಪಿಆರ್ (Detailed Project Report) ಬಜೆಟ್! ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟ ಪ್ರತಿಕ್ರಿಯೆ ಇದು.
ಪ್ರಸಕ್ತ ಸಾಲಿನ ಆಯವ್ಯಯದ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಸರಕಾರದಿಂದ ಯವುದಾದರೂ ಯೋಜನೆ ಜಾರಿ ಮಾಡುವ ಮುನ್ನ ಸಮಗ್ರ ಯೋಜನಾ ವರದಿ (DPR) ಅಂತ ಮಾಡುತ್ತಾರೆ. ಆ DPR ಆದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಜೆಟ್ ಕೂಡ ಹಾಗೆಯೇ ಇದೆ ಎಂದರು.
ಈ ಬಜೆಟ್ ಅನ್ನು ನೋಡಿದರೆ ಇದು ನಾಳೆ ಬಾ ಸರಕಾರದಂತೆ ಇದೆ ಎಂದು ಅವರು ಟೀಕಿಸಿದರು.
ಬಜೆಟ್ ಓದುವಾಗಲೇ ನನಗೆ ಅನಿಸಿದ್ದು ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಅವರು ಗ್ಯಾರಂಟಿಯ ಗುಂಗಿನಿಂದ ಇನ್ನೂ ಹೊರಗೇ ಗೆ ಬಂದಿಲ್ಲ. 10 ತಿಂಗಳು ಕಳೆದರೂ ಇನ್ನೂ ಗ್ಯಾರಂಟಿಗಳ ಬಗ್ಗೆಯೇ ಕನವರಿಕೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ವಿಶ್ವಾಸ ಮೂಡುತ್ತಿಲ್ಲ:
ಸಿದ್ದರಾಮಯ್ಯ ಅವರ 15ನೇ ಬಜೆಟ್ ಇದು. ರಾಜ್ಯದ ಇತಿಹಾಸದಲ್ಲಿ 15 ಬಜೆಟ್ ಗಳನ್ನು ಮಂಡಿಸುವವರು ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಸಾಕಷ್ಟು ಅನುಭವ ಇದೆ. ಆದರೆ, ಬಜೆಟ್ ನೋಡಿದರೆ ಯಾವುದೇ ರೀತಿಯ ವಿಶ್ವಾಸ ಮೂಡುತ್ತಿಲ್ಲ ಈ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.