ಬೆಂಗಳೂರು, ಮಾರ್ಚ್ 21 (ಕರ್ನಾಟಕ ವಾರ್ತೆ): ಬಜೆಟ್ ಕೇವಲ ಅಂಕಿ ಸಂಖ್ಯೆಗಳ ಆಟವಲ್ಲ. ಇದು 7 ಕೋಟಿ ಜನರ ಬದುಕಿನ ಉಸಿರಿನ ಪ್ರತೀಕ, ಬಜೆಟ್‍ನಲ್ಲಿ ನಮ್ಮ ಸರ್ಕಾರದ ಧ್ಯೇಯೋದ್ದೇಶಗಳು, ಅಭಿವೃದ್ಧಿಗಳ ಕುರಿತದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಹೇಳಿದರು.
ಇಂದು ವಿಧಾನಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಉತ್ತರವನ್ನು ನೀಡಿದ ಅವರು 4-5 ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಬಜೆಟ್ ಮೇಲೆ ಚರ್ಚಿಸಲಾಗಿದೆ. ಮುಖ್ಯವಾಗಿ, ರಾಜ್ಯದ ಸಾಲ ಹಾಗೂ ಆರ್ಥಿಕ ಪರಿಸ್ಥಿತಿ, ಗ್ಯಾರಂಟಿ ಯೋಜನೆಗಳು, ಎಸ್.ಸಿ. ಎಸ್.ಪಿ ಮತ್ತು ಟಿ.ಎಸ್.ಪಿ ವಿಚಾರ, ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ, ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನ ಹಾಗೂ ಪ್ರದೇಶವಾರು ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ.
ಬಜೆಟ್ ಕುರಿತು ಮಾಧ್ಯಮದವರು ಅಭೂತಪೂರ್ವವಾಗಿ ಸ್ವಾಗತಿಸಿವೆ. ಶ್ಲಾಘನೆ ಮಾಡಿವೆ. ವಿಶ್ಲೇಷಣೆಗಳನ್ನು ಬರೆದಿವೆ. ನಮ್ಮ ಬಜೆಟ್‍ನ್ನು ಅರ್ಥ ಮಾಡಿಕೊಂಡು ಜನರಿಗೆ ತಲುಪಿಸಿವೆ. ಇದಲ್ಲದೇ ನಾಡಿನ ಜನತೆ, ವಿವಿಧ ಸಂಘ ಸಂಸ್ಥೆಗಳಾದ ಎಫ್‍ಕೆಸಿಸಿಐ, ಸಿ.ಐ.ಐ., ಚಲನಚಿತ್ರ ರಂಗ ಇನ್ನಿತರ ಸಂಘಸಂಸ್ಥೆಗಳು ಸರ್ಕಾರದ ಬಜೆಟ್ ನ್ನು ಹೊಗಳಿದ್ದಾರೆ. ನಾಡಿನ ವಿವಿಧ ವಲಯಗಳ ಜನರು ನಮ್ಮ ಬಜೆಟ್ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳು ನಮಗೆ ಇನ್ನಷ್ಟು ಶಕ್ತಿ ತುಂಬಲಿವೆ ಎಂದು ಅವರು ತಿಳಿಸಿದರು.
2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್‍ನ್ನು ನಾನು ಮಂಡಿಸಿದ್ದೇನೆ. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಮ್ಮ ರಾಜ್ಯದ ಬಜೆಟ್ ಗಾತ್ರ ಶೇ.10.3 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಜನಸಂಖ್ಯೆಯ ಗಾತ್ರದಲ್ಲಿ ಕರ್ನಾಟಕವು 8ನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹಿಸಿ ಕೊಡುವ ವಿಚಾರದಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಜಿಡಿಪಿಯಲ್ಲಿ ಕರ್ನಾಟಕವು ಮಹಾರಾಷ್ಟ್ರ, ತಮಿಳುನಾಡಿನ ನಂತರ 3ನೇ ಸ್ಥಾನದಲ್ಲಿದೆ. ಆದರೆ, 2025-26ನೇ ಸಾಲಿನ ನಮ್ಮ ಬಜೆಟ್ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ 5ನೇ ದೊಡ್ಡ ಬಜೆಟ್ ಆಗಿದೆ ಎಂದು ಹೇಳಿದರು.
2024-25 ರಲ್ಲಿ 1,89,893 ಕೋಟಿ ರೂ.ಗಳಷ್ಟು ರಾಜ್ಯದ ಸ್ವಂತ ತೆರಿಗೆ ಸಂಗ್ರಹವಾಗಬಹುದೆಂದು ಅಂದಾಜು ಮಾಡಲಾಗಿತ್ತು. ಫೆಬ್ರವರಿ ಅಂತ್ಯದವರೆಗೆ 1,57,111 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದ್ದು, ಶೇ. 82.7 ರμÁ್ಟಗಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಸುಮಾರು 1,77,000 ಕೋಟಿ ರೂ.ಗಳಷ್ಟು ಸಂಗ್ರಹವಾಗಬಹುದು. ಇದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ತುಸು ಕಡಿಮೆ. ಇದು ಕರ್ನಾಟಕದಲ್ಲಿ ಅμÉ್ಟೀ ಅಲ್ಲ, ಇಡೀ ದೇಶದಲ್ಲಿಯೂ ಸಂಭವಿಸುತ್ತಿದೆ. ಕರ್ನಾಟಕವು ದೇಶದ ಒಂದು ಭಾಗ. ದೇಶದಲ್ಲಿ ನಡೆಯುವ ಬೆಳವಣಿಗೆಗಳು ರಾಜ್ಯದ ಮೇಲೂ ಪರಿಣಾಮ ಬೀರುತ್ತವೆ. ಇದು ದೇಶದ ಆರ್ಥಿಕ ಬೆಳವಣಿಗೆಯು ಸಮರ್ಪಕವಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ರಾಜ್ಯವು ಅಭಿವೃದ್ಧಿ ಹೊಂದುತ್ತಿದೆ ಎಂಬುದಕ್ಕೆ ನಮ್ಮ ಬಜೆಟ್ ಸಾಕ್ಷಿಯಾಗಿದೆ. 2022-23 ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರ 2025-26ನೇ ಸಾಲಿಗೆ 4,09,549 ಕೋಟಿ ರೂ. ಗಳಿಗೆ ಏರಿಕೆ ಆಗುತ್ತದೆ. ವ್ಯತ್ಯಾಸ 2022-23ಕ್ಕೆ ಹೋಲಿಸಿದರೆ 1,43,829 ಕೋಟಿ ರೂ.ಗಳμÁ್ಟಗುತ್ತದೆ. ನಮ್ಮ ಆಯವ್ಯಯ ಗಾತ್ರ ಶೇ.54.12 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಈ ವರ್ಷ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ.ಗಳನ್ನು ನಾನು ಒದಗಿಸಿದ್ದೇನೆ. ನಾನು ಮೊದಲೆ ಹೇಳಿದ ಹಾಗೆ ನಮ್ಮ ಸರ್ಕಾರ ಜನರ ಕಲ್ಯಾಣವನ್ನು ಹಾಗೂ ರಾಜ್ಯದ ಅಭಿವೃದ್ಧಿಯನ್ನು ಏಕಕಾಲದಲ್ಲಿ ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಕುರಿತ ಜಗತ್ತಿನ ವ್ಯಾಖ್ಯಾನಗಳು ಬದಲಾಗುತ್ತಿವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾದರೆ, ಆರ್ಥಿಕತೆಯ ಪ್ರಗತಿ ವೇಗವಾಗುತ್ತದೆ. ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಆರ್ಥಿಕತೆ ಅಂಗವಿಕಲವಾಗುತ್ತದೆ. ಇದೇ ಗುಜರಾತಿನ ಮಾದರಿಗೂ ಕರ್ನಾಟಕದ ಮಾದರಿಗೂ ಇರುವ ವ್ಯತ್ಯಾಸ.
ಇನ್ನು ವಿತ್ತೀಯ ಶಿಸ್ತನ್ನು ನಮ್ಮ ಬಜೆಟ್ ಕಾಪಾಡಿಕೊಂಡಿದೆ. ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.3 ರಷ್ಟನ್ನು ಮೀರಬಾರದು ಎಂದಿದೆ. ಅದರಂತೆ ನಮ್ಮ ವಿತ್ತೀಯ ಕೊರತೆಯು ಶೇ.2.95 ರಷ್ಟಿದೆ. ಹಾಗೆಯೇ ಜಿ.ಎಸ್.ಡಿ.ಪಿ ಗೆ ಎದುರಾಗಿ ನಮ್ಮ ಹೊಣೆಗಾರಿಕೆಗಳು ಶೇ.25 ರಷ್ಟನ್ನು ಮೀರಬಾರದು ಎಂದಿದೆ. 2025-26ರ ಹೊಣೆಗಾರಿಕೆ ಶೇ.24.91 ರμÁ್ಟಗುತ್ತದೆ. ಕರ್ನಾಟಕವು 2021-22 ರಲ್ಲಿ ಶೇ.26.71 ರಷ್ಟು ಹೊಣೆಗಾರಿಕೆಯನ್ನು ಹೊಂದಿತ್ತು. 2021-22 ರಲ್ಲಿ ವಿತ್ತೀಯ ಕೊರತೆ ಶೇ. 3.03 ರಷ್ಟಿತ್ತು.
ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ಸೇರಿದಂತೆ ಇತರೆ ಎಲ್ಲಾ ಕಲ್ಯಾಣ ಯೋಜನೆಗಳಿಗೆ ಹಾಗೂ ಸಹಾಯಧನಗಳಿಗೆ ಸರಿ ಸುಮಾರು 1 ಲಕ್ಷ ಕೋಟಿವರೆಗೆ ವಿನಿಯೋಗಿಸುತ್ತಿದೆ. 2024-25 ರಲ್ಲಿ 7ನೇ ವೇತನ ಆಯೋಗ ಜಾರಿ ಆಗಿರುವುದರಿಂದ 2025-26 ನೆ ಸಾಲಿಗೆ ಸರ್ಕಾರಿ ನೌಕರರ ಸಂಬಳಕ್ಕಾಗಿ 85,860 ಕೋಟಿ ರೂ. ಮತ್ತು ಪಿಂಚಣಿಗಾಗಿ 38,580 ಕೋಟಿ ರೂ. ಸೇರಿ ಒಟ್ಟು ವೇತನಗಳಿಗಾಗಿ 1,24,440 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ. ಬಡ್ಡಿ ಪಾವತಿಗಾಗಿ 45,600 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿಗಳಿಗಾಗಿ ಒಟ್ಟು 1,70,040 ಕೋಟಿ ರೂ.ಗಳು.
2025-26ರ ಬಜೆಟ್ ಬಡವರ, ಮಹಿಳೆಯರ, ಮಕ್ಕಳ, ಶೋಷಿತರ, ದುರ್ಬಲ ವರ್ಗದವರ, ಯುವಜನರ, ಕಾರ್ಮಿಕರ, ರೈತರ, ಹಿಂದುಳಿದವರ, ಅಲ್ಪಸಂಖ್ಯಾತರ ಏಳಿಗೆಯನ್ನು ಹಾಗೂ ಸಂಪತ್ತನ್ನು ಉತ್ಪಾದನೆ ಮಾಡುವವರ ಹಿತರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಾಡಿನ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುμÁ್ಠನ ಮಾಡುವ ಮೂಲಕ ಕರ್ನಾಟಕವನ್ನು ಸಮಗ್ರ ಹಾಗೂ ಸುಸ್ಥಿರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮಿಸುವ ನಿಟ್ಟಿನಲ್ಲಿ ನಾನು ಆಯವ್ಯಯವನ್ನು ರೂಪಿಸಲಾಗಿದೆ.
ಈ ಬಾರಿ ನಮ್ಮ ಸರ್ಕಾರ ಮಂಡಿಸಿರುವ ಆಯವ್ಯಯವು ಗ್ಯಾರಂಟಿ ಯೋಜನೆಗಳ ಆಯವ್ಯಯ ಅμÉ್ಟೀ ಅಲ್ಲ, ಇದು ವೆಲ್‍ಫೇರ್ ಬಿಯಾಂಡ್ ಗ್ಯಾರೆಂಟಿ ಎಂದು ತಿಳಿಸಿ ನಮ್ಮ ಬಜೆಟ್ ನಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರಿಗೆ ತಲಾ 1000 ರೂ ಹೆಚ್ಚು ಮಾಡಿದ್ದೇವೆ. ಅತಿಥಿ ಉಪನ್ಯಾಸಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ತಲಾ 2000 ರೂ ಹೆಚ್ಚು ಮಾಡಲಾಗಿದೆ. ಪತ್ರಕರ್ತರಿಗೆ ತಲಾ 3000 ರೂ, ಕಲಾವಿದರಿಗೆ ತಲಾ 500 ರೂ, ಕುಸ್ತಿ ಪಟುಗಳಿಗೆ ತಲಾ 1000 ರೂ ಹೆಚ್ಚು ಮಾಡಲಾಗಿದೆ. ಎಲ್ಲಾ ಧರ್ಮದ ಪುರೋಹಿತರಿಗೆ ಸಮಾನವಾಗಿ ಮಾಸಿಕ 6000 ರೂ ಗೌರವಧನ ನೀಡಲು ಉದ್ದೇಶಿಸಲಾಗಿದೆ. ಬಂಡವಾಳ ವೆಚ್ಚಗಳಿಗೆ ಈ ವರ್ಷ 83,200 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇμÁ್ಟದರೂ ಸಹ, ನಮ್ಮ ವಿತ್ತೀಯ ಶಿಸ್ತು ನಿಯಮಗಳಿಗೆ ಅನುಗುಣವಾಗಿಯೇ ಇದೆ ಎಂದರು.
2025-26ನೇ ಸಾಲಿಗೆ ಸಂಬಂಧಪಟ್ಟಂತೆ ಒಟ್ಟಾರೆ ರಾಜ್ಯದ ರಾಜಸ್ವ ಸ್ವೀಕೃತಿ 2,92,470 ಕೋಟಿ ರೂ. ಗಳμÁ್ಟದರೆ ರಾಜಸ್ವ ವೆಚ್ಚ 3,11,739 ಕೋಟಿ ರೂ. ಆಗಬಹುದು. ಇದರಿಂದ 19,262 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಆಗಲಿದೆ ಎಂಬುದು ಅಂದಾಜು. ಇದು ಕಡಿಮೆ ಆಗಲೂಬಹುದು. 2024-25ರ ಬಜೆಟ್ ಮಂಡಿಸಿದಾಗ 27,354 ಕೋಟಿ ರೂ.ಗಳಷ್ಟು ರೆವೆನ್ಯೂ ಡಿಫಿಸಿಟ್ ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಪರಿಷ್ಕøತ ಅಂದಾಜಿನಂತೆ 26,127 ಕೋಟಿ ರೂ.ಗಳμÁ್ಟಗಬಹುದೆಂದು ಅಂದಾಜು ಮಾಡಲಾಗಿದೆ. ಒಟ್ಟಾರೆ 2024-25 ಕ್ಕೆ ಹೋಲಿಸಿದರೆ 2025-26 ರಲ್ಲಿ ಸುಮಾರು 8,000 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆ ಕಡಿಮೆ ಆಗುತ್ತದೆ. 2024-25ರ ಆಯವ್ಯಯದ ಅಂದಾಜಿನಲ್ಲಿ ರಾಜಸ್ವ ಕೊರತೆಯು ಜಿ.ಎಸ್.ಡಿ.ಪಿ.ಯ ಶೇ.0.96 ರಿಂದ 2025-26ರ ಆಯವ್ಯಯದಲ್ಲಿ ಶೇ.0.63 ಕ್ಕೆ ಇಳಿಕೆಯಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ನೀಡುವಾಗ ನಾನು ಹೇಳಿದಂತೆ 2026-27ನೇ ಸಾಲಿಗೆ ರಾಜ್ಯದ ಬಜೆಟ್ ರಾಜಸ್ವ ಕೊರತೆಯಿಂದ ಹೊರಬರುತ್ತದೆ, ಮುಂದಿನ ದಿನಗಳಲ್ಲಿ ಉಳಿತಾಯ ಬಜೆಟ್ಟನ್ನು ಮಂಡಿಸುವ ದೃಢ ವಿಶ್ವಾಸವಿದೆ ಎಂದರು.
ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರಾಜ್ಯಗಳ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 2013 ರಿಂದ 2017 ರವರೆಗೆ ಕೇವಲ 04 ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಿತ್ತು. ಹಾಗೆಯೇ 5 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚು ಇದ್ದವು. ಆದರೆ 2024-25 ರಲ್ಲಿ ದೇಶದ ಪ್ರಮುಖ 14 ರಾಜ್ಯಗಳ ಪೈಕಿ 10 ರಾಜ್ಯಗಳ ಒಟ್ಟು ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚಿಗೆ ಇವೆ. ಅದೇ ರೀತಿ, 6 ಕ್ಕಿಂತ ಹೆಚ್ಚು ರಾಜ್ಯಗಳ ವಿತ್ತೀಯ ಕೊರತೆ ಶೇ.3 ಕ್ಕಿಂತ ಹೆಚ್ಚಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಬಿಡುಗಡೆ ಮಾಡಿರುವ ದಾಖಲೆಗಳಂತೆ 2014 ರಲ್ಲಿ ಮನಮೋಹನ್ ಸಿಂಗ್ ಅವರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ ದೇಶದ ಎಲ್ಲಾ ರಾಜ್ಯಗಳ ಒಟ್ಟು ಸಾಲ 25.1 ಲಕ್ಷ ಕೋಟಿ ರೂ.ಗಳಷ್ಟಿತ್ತು. (ಮಾರ್ಚ್ 31-2014) 2024 ರ ಮಾರ್ಚ್-31 ರ ವೇಳೆಗೆ 83.32 ಲಕ್ಷ ಕೋಟಿ ರೂ.ಗಳಷ್ಟು ಎಂದು ಆರ್.ಬಿ.ಐ ದಾಖಲೆ ಬಿಡುಗಡೆ ಮಾಡಿದೆ. ಈ ವರ್ಷದ ಕಡೆಗೆ ಎಲ್ಲಾ ರಾಜ್ಯಗಳ ಸಾಲದ ಪ್ರಮಾಣ 95-100 ಲಕ್ಷ ಕೋಟಿ ರೂ.ಗಳμÁ್ಟಗಬಹುದು.
ರಾಜ್ಯಗಳ ಪರಿಸ್ಥಿತಿ ಈ ರೀತಿಯಾದರೆ ಕೇಂದ್ರ ಸರ್ಕಾರವು ಕೂಡ ಸಾಲದಲ್ಲಿ ಮುಳುಗಿದೆ. 2014 ರಲ್ಲಿ ದೇಶದ ಸಾಲ ಸುಮಾರು 53.11 ಲಕ್ಷ ಕೋಟಿ ರೂ.ಗಳಷ್ಟಿತ್ತು. ಆದರೆ 2025-26 ನೇ ಸಾಲಿನ ಬಜೆಟ್ ಮಂಡಿಸುವಾಗ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರ ಮಾಡಿರುವ ಸಾಲದ ಪ್ರಮಾಣ 200.16 ಲಕ್ಷ ಕೋಟಿ ರೂ.ಗಳμÁ್ಟಗಬಹುದೆಂದು ಪ್ರಸ್ತಾಪ ಮಾಡಿದ್ದಾರೆ. ರಾಜ್ಯಗಳೂ ಹೆಚ್ಚು ಸಾಲ ಮಾಡುವಂತಾಗಿದೆ. ಕೇಂದ್ರವೂ ಹೆಚ್ಚು ಸಾಲ ಮಾಡುತ್ತಿದೆ. ಒಟ್ಟಾರೆ ವೆಚ್ಚದಲ್ಲಿ ರಾಜ್ಯಗಳ ಪಾಲು ಶೇ.60-65 ರಷ್ಟು ಇರಬೇಕು ಎಂಬುದು ಮೊದಲಿನಿಂದ ನಡೆದುಕೊಂಡು ಬಂದ ನಿಯಮ. ಆದರೆ ಈಗ ಅದು ವ್ಯತ್ಯಾಸವಾಗುತ್ತಿದೆ. ಕೇಂದ್ರವು ಸೆಸ್‍ಗಳ ನೆಪದಲ್ಲಿ ಸುಲಿಗೆ ಮಾಡುತ್ತಿದೆ. ಸೆಸ್‍ಗಳನ್ನು ತೆರಿಗೆ ಪಾಲಿನ ವ್ಯಾಪ್ತಿಗೆ ಒಳಪಡಿಸಬೇಕು ಹಾಗೂ ತೆರಿಗೆ ಪಾಲಿನಲ್ಲೂ ನಮಗೆ ಶೇ. 50 ರಷ್ಟು ಕೊಡಬೇಕು ಎಂಬ ಬೇಡಿಕೆಯನ್ನೂ ಇಡಲಾಗಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ಆರೋಪಕ್ಕೆ 2013-14 ರಿಂದ 2017-18 ಹಾಗೂ 2023-24 ರಿಂದ 2024-25 ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ ಪಡೆದಿರುವ ಒಟ್ಟು ಸಾಲವು 3,21,037 ಕೋಟಿ ರೂ.ಗಳು. ಈ ಅವಧಿಯಲ್ಲಿ ಹಿಂದಿನ ಸರ್ಕಾರಗಳು ಮಾಡಿದ ಸುಮಾರು 75,856 ಕೋಟಿ ರೂ.ಗಳನ್ನು ತೀರಿಸಲಾಗಿದೆ ಅಲ್ಲದೆ, ಈ ಅವಧಿಯಲ್ಲಿ 2,37,524 ಕೋಟಿ ರೂ. ಗಳಷ್ಟು ಅನುದಾನವನ್ನು ಬಂಡವಾಳ ಕಾಮಗಾರಿಗಳಿಗೆ ನೀಡಲಾಗಿದೆ ಹಾಗೂ ಬಂಡವಾಳ ಯೋಜನೆಗಳಿಗೆ ಅನುದಾನ ಒದಗಿಸುವ ಮೂಲಕ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಯಾಗಿರುತ್ತದೆ.
ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ಪ್ರಮುಖ: ಮಾಹಿತಿ ತಂತ್ರಜ್ಞಾನ, ಕೈಗಾರಿಕೆ, ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಯಾಗಿರುತ್ತದೆ. ಇದರಿಂದ ರಾಜ್ಯದಲ್ಲಿ ಹೂಡಿಕೆಗಳು ಹೆಚ್ಚಳವಾಗಿದ್ದು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಇದರ ಪರಿಣಾಮವಾಗಿ ದೇಶದಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕವು ಪ್ರಮುಖ ರಾಜ್ಯವಾಗಿದೆ. 2012-13 ರಲ್ಲಿ 57,720 ಕೋಟಿ ರೂ.ಗಳಿದ್ದ ರಾಜ್ಯದ ಸ್ವಂತ ರಾಜಸ್ವವು 2025-26 ರಲ್ಲಿ 2,24,600 ಕೋಟಿ ರೂ.ಗಳಿಗೆ ಹೆಚ್ಚಾಗಿರುತ್ತದೆ. ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ. ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರವು 3.12 ಲಕ್ಷ ಕೋಟಿ ಸಾಲ ಪಡೆದಿರುವುದು ನಿಜ. ಆದರೆ ಈ ಸಾಲವನ್ನು ಬಂಡವಾಳ ಯೋಜನೆಗಳಿಗೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೆ ವಿನಿಯೋಗಿಸಲಾಗಿರುತ್ತದೆ. ಅಲ್ಲದೆ, ನನ್ನ ಸರ್ಕಾರದ ಅವಧಿಯಲ್ಲಿ ಈವರೆಗೂ ಮಾಡಿರುವ ಸಾಲವು ಕೇಂದ್ರ ಸರ್ಕಾರ ವಿಧಿಸಿರುವ ಮಿತಿಯೊಳಗೆ ನಿರ್ವಹಿಸಲಾಗಿರುತ್ತದೆ ಹಾಗೂ ನಮ್ಮ ಅಧಿಕಾರಾವಧಿಯಲ್ಲಿ ವಿತ್ತೀಯ ಶಿಸ್ತನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿದೆ ಎಂದು ತಿಳಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಬಂಡವಾಳ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡಿದ್ದ ಕಾರಣ ರಾಜ್ಯದ ಜಿ.ಎಸ್.ಡಿ.ಪಿ.ಯು 2012-13 ರಲ್ಲಿ 6.95 ಲಕ್ಷ ಕೋಟಿ ರೂ.ಗಳಿಂದ 2025-26 ರಲ್ಲಿ 30.70 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ರಾಜ್ಯದ ಜಿ.ಎಸ್.ಡಿ.ಪಿ.ಯು ಈ ಅವಧಿಯಲ್ಲಿ 23.75 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಾವು 2026 ರವರೆಗೆ ಜಿ.ಎಸ್.ಟಿ. ಪರಿಹಾರದ ಸೆಸ್ ಅನ್ನು ಸಂಗ್ರಹಿಸುತ್ತೇವೆ. ಅದರ ಬದಲಾಗಿ ನಾವೇ ಸಾಲ ತೆಗೆದು ನಿಮಗೆ ಕೊಡುತ್ತೇವೆ. ಆದ್ದರಿಂದ, ನೀವು ವಿದ್ಯುತ್ ಸುಧಾರಣೆ, ತೆರಿಗೆ ಸಂಗ್ರಹ ಇವುಗಳನ್ನು ಬಿಗಿಗೊಳಿಸಬೇಕು ಎಂದರು. ನಮ್ಮ ಆರ್ಥಿಕ ಇಲಾಖೆಯವರು ಅದನ್ನು ರಾಜ್ಯದ ಸಾಲದ ವ್ಯಾಪ್ತಿಯಿಂದ ಹೊರಗಿಟ್ಟರು. ವಾಸ್ತವವಾಗಿ ಅಕೌಂಟೆಂಟ್ ಜನರಲ್ ಅವರ ಲೆಕ್ಕದ ಪ್ರಕಾರ ಅದು ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಆದರೆ ಕೇಂದ್ರ ಸರ್ಕಾರವು ಅದನ್ನು ಹೊರಗಿಡಬೇಕು ಎಂದು ವಿನಂತಿ ಮಾಡಿದ್ದರಿಂದ ಅಕೌಂಟೆಂಟ್ ಜನರಲ್ ರವರು ಮೌನವಾಗಿದ್ದಾರೆ.
2020-21 ರಲ್ಲಿ ಆರ್ಥಿಕ ಇಲಾಖೆಯ ಪ್ರಕಾರ 72,121 ಕೋಟಿ ರೂ., ಆದರೆ ಕೇಂದ್ರ ಸರ್ಕಾರದ ಜಿ.ಎಸ್.ಟಿ. ಪರಿಹಾರದ ಬದಲಾಗಿ ಪಡೆದು ಕೊಟ್ಟ ಸಾಲ 12,407 ಕೋಟಿ., ವಾಸ್ತವ ವಿತ್ತೀಯ ಕೊರತೆ ಸ್ಥಿತಿ ಶೇ.4.69 ಆಗುತ್ತದೆ. 2021-22 ರಲ್ಲಿ ಆರ್ಥಿಕ ಇಲಾಖೆಯ ಪ್ರಕಾರ 65,532 ಕೋಟಿ ರೂ., ಆದರೆ ಕೇಂದ್ರ ಸರ್ಕಾರದ ಜಿ.ಎಸ್.ಟಿ. ಪರಿಹಾರದ ಬದಲಾಗಿ ಪಡೆದುಕೊಟ್ಟ ಸಾಲ 18,109 ಕೋಟಿ., ವಾಸ್ತವ ವಿತ್ತೀಯ ಕೊರತೆ ಸ್ಥಿತಿ ಶೇ. 4.86 ಆಗುತ್ತದೆ. ನಮ್ಮ ಜನರಿಂದ 2026 ರವರೆಗೆ ಜಿ.ಎಸ್.ಟಿ. ಸೆಸ್ ಅನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಅದರಲ್ಲಿ ನಮಗೆ ಪಾಲು ಕೊಡಿ ಎಂದರೆ ನಿಮಗೆ ಸಾಲ ಕೊಟ್ಟಿದೇವೆ ಅದನ್ನು ತೀರಿಸುತ್ತಿದ್ದೇವೆ ಎನ್ನುತ್ತಾರೆ. ನಮಗಿರುವ ಮಾಹಿತಿಯ ಪ್ರಕಾರ ಅವರು ಕೊಟ್ಟ ಸಾಲ 30,516 ಕೋಟಿ ರೂ.ಗಳು 2024 ಕ್ಕೆ ಮುಗಿದು ಹೋಗಿದೆ. ವಿರೋಧ ಪಕ್ಷದವರು 2022-23 ರಲ್ಲಿ 44,549 ಕೋಟಿ ಸಾಲ ತೆಗೆದುಕೊಳ್ಳಲಾಗಿತ್ತು ಎನ್ನುತ್ತಾರೆ. ವಾಸ್ತವ ಸ್ಥಿತಿ ಏನೆಂದರೆ, ಕೇಂದ್ರ ಸರ್ಕಾರ ಇಲ್ಲಿ ಚುನಾವಣಾ ರಾಜಕೀಯ ಮಾಡಿತು. 2023 ರಲ್ಲಿ ಚುನಾವಣೆ ಬರುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಮಹಾಲೇಖಪಾಲರ ಆಡಿಟ್ ಆಗುವುದಕ್ಕೆ ಮೊದಲೆ ಅದುವರೆಗೂ ಬಾಕಿ ಇದ್ದ ಜಿ.ಎಸ್.ಟಿ. ಪರಿಹಾರವಾದ 20,288 ಕೋಟಿ ರೂ.ಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಿತು. ಅದರಿಂದಾಗಿ ಆ ವರ್ಷ ಸಾಲದ ಪ್ರಮಾಣ ಸ್ವಲ್ಪ ಕಡಿಮೆ ಆಯಿತು.
ರಾಜ್ಯವು ಹಣಕಾಸಿನ ಕೊರತೆ ಎದುರಿಸಲು ಮುಖ್ಯ ಕಾರಣ ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ ಹಾಗೂ ಸಂಪನ್ಮೂಲ ಹಂಚಿಕೆಯಲ್ಲಿ ಮಾಡಿದ ದ್ರೋಹ ಮೊದಲ ಕಾರಣವಾದರೆ, ಎರಡನೆಯದಾಗಿ ಹಿಂದೆ ಆಡಳಿತ ನಡೆಸಿದ್ದ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಆರ್ಥಿಕ ಅಶಿಸ್ತು ಹಾಗೂ ಅರಾಜಕ ಆಡಳಿತದಿಂದಾಗಿ ಸಮಸ್ಯೆಗಳು ಉದ್ಭವಿಸಿವೆ ಎಂದರು.
2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.42 ಲಕ್ಷ ಕೋಟಿ ರೂ.ಇದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ 46,288 ಕೋಟಿ ರೂ. ಬಂದಿತ್ತು. ಈಗ ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಮೀರಿದೆ. 2018-19 ಕ್ಕೆ ಹೋಲಿಸಿದರೆ ಶೇ.100 ರಷ್ಟು ಹೆಚ್ಚಾಗಿದೆ. ಆ ಲೆಕ್ಕಕ್ಕೆ ಹೋಲಿಸಿದರೆ 2025-26ನೇ ಸಾಲಿಗೆ ನಮಗೆ ಕನಿಷ್ಠ 1 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕøತ ಯೋಜನೆಗಳಿಂದ ಅನುದಾನ ಬರಬೇಕಾಗಿತ್ತು. ಆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಒಂದು ನಮಗೆ ಸಮರ್ಪಕವಾಗಿ ತೆರಿಗೆ ಪಾಲೂ ಸಿಗುತ್ತಿಲ್ಲ. ಯೋಜನೆಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಕರ್ನಾಟಕಕ್ಕೆ 14 ನೇ ಹಣಕಾಸು ಆಯೋಗವು ಶೇ. 4.71 ರಷ್ಟು ತೆರಿಗೆ ಪಾಲು ನೀಡಿತ್ತು. ಆದರೆ 15 ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಸಿದರು. ಶೇ.23 ರಷ್ಟು ಕುಸಿತವಾಯಿತು. ಇದರಿಂದ ಪ್ರತಿ ವರ್ಷ 12 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದμÉ್ಟ ಅಲ್ಲದೆ 15 ನೇ ಹಣಕಾಸು ಆಯೋಗವು 5,495 ಕೋಟಿ ರೂ.ವಿಶೇಷ ಅನುದಾನ ಕೊಡಲು ಶಿಫಾರಸ್ಸು ಮಾಡಿತ್ತು. ಕೆರೆಗಳ ಅಭಿವೃದ್ಧಿಗೆ 3000 ಕೋಟಿ ಹಾಗೂ ಫೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3000 ಕೋಟಿ ರೂ ಶಿಫಾರಸ್ಸು ಮಾಡಿತ್ತು. ಅದನ್ನೂ ಕೊಡಲಿಲ್ಲ. ಹಾಗೆಯೇ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿಗಳನ್ನು ನೀಡಿರುವುದಿಲ್ಲ.
ವಿರೋಧ ಪಕ್ಷದವರು ಕೇಂದ್ರದಿಂದ ವ್ಯಾಪಕ ಪ್ರಮಾಣದಲ್ಲಿ ಅನುದಾನಗಳನ್ನು ರಾಜ್ಯಕ್ಕೆ ತಂದು ರಾಜ್ಯದ ಹೆದ್ದಾರಿ ಹಾಗೂ ರೈಲ್ವೆ ಯೋಜನೆಗಳಿಗೆ ನೀಡಲಾಗಿದೆ ತಿಳಿಸಿದ್ದಾರೆ. ಡಿಸೆಂಬರ್-9, 2024 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ದಾಖಲೆಗಳ ಪ್ರಕಾರ ಸತ್ಯಾಂಶ ಈ ರೀತಿ ಇದೆ. 2004-05ರಲ್ಲಿ ನಿರ್ಮಿಸಿದ ರಸ್ತೆಯ ಕುರಿತು ಮಾಹಿತಿ ಆರ್.ಬಿ.ಐ., ದಾಖಲೆಗಳಲ್ಲಿಲ್ಲ. 9 ವರ್ಷಗಳಲ್ಲಿ ಕರ್ನಾಟಕದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ 2329 ಕಿ.ಮೀ. ರಸ್ತೆ ನಿರ್ಮಾಣ ಮಾಡಿತ್ತು. 2014 ರಿಂದ 2024 ರವರೆಗೆ 2014 ಕಿಮೀ ರಸ್ತೆಯನ್ನು ನಿರ್ಮಿಸಲಾಗಿದೆ. 2005 ರಿಂದ 2014 ರವರೆಗಿನ 9 ವರ್ಷಗಳಲ್ಲಿ ಸುಮಾರು 7 ವರ್ಷಗಳ ಕಾಲ ಕಾಂಗ್ರೆಸ್ಸೇತರ ಸರ್ಕಾರಗಳೆ ರಾಜ್ಯದಲ್ಲಿ ಆಡಳಿತ ನಡೆಸಿದ್ದವು. ಆದರೂ ಕೂಡ ಮನಮೋಹನ್ ಸಿಂಗ್ ಅವರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಅನುದಾನಗಳನ್ನು ಯಥೇಚ್ಛವಾಗಿ ಕೊಟ್ಟಿತ್ತು ಹಾಗೂ ಮೂಲಸೌಕರ್ಯ ನಿರ್ಮಾಣ ಮಾಡಲು ಶ್ರಮಿಸಿದೆ ಎಂದರು. ಕಳೆದ 10 ವರ್ಷಗಳಲ್ಲಿ ಹಿಂದೆ ನಿರ್ಮಿಸಿದ್ದಕ್ಕಿಂತ ಕಡಿಮೆ ಉದ್ದದ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ 12,210 ಕಿ.ಮೀ., ಉತ್ತರ ಪ್ರದೇಶದಲ್ಲಿ 4306 ಕಿ.ಮೀ., ಗುಜರಾತ್ ನಲ್ಲಿ 3405 ಕಿ.ಮೀ., ರಾಜಸ್ಥಾನದಲ್ಲಿ 3060 ಕಿ.ಮೀ. ಉದ್ದದ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ವಿವಿಧ ರಾಜ್ಯಗಳಿಗೆ ಕೇಂದ್ರದಿಂದ ದೊರಕುತ್ತಿರುವ ತೆರಿಗೆ ಪಾಲು ಹಾಗೂ ಸಹಾಯಾನುದಾನಗಳ ವಿವರ ರಾಜ್ಯಕ್ಕೆ ರಸ್ತೆಗಳಲ್ಲಿ, ರೈಲ್ವೆ ಯೋಜನೆಗಳಲ್ಲಿ, ಬಂದರು ಮುಂತಾದ ಮೂಲಭೂತ ಸೌಕರ್ಯ ಯೋಜನೆಗಳಲ್ಲಿ ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಿಗೆ ಕೊಟ್ಟಷ್ಟು ಅನುದಾನಗಳನ್ನು ಕೊಡಲಿಲ್ಲ. ನೇರವಾಗಿ ನ್ಯಾಯುತವಾಗಿ ಬರಬೇಕಾದ ತೆರಿಗೆ ಪಾಲು, ಕೇಂದ್ರ ಸಹಾಯಾನುದಾನಗಳನ್ನು ಕಡಿಮೆ ಮಾಡಲಾಗುತ್ತಿದೆ. ಕೇಂದ್ರದಿಂದ ಅನುದಾನಗಳು ಬರದೆ ರಾಜ್ಯದ ಆರ್ಥಿಕ ಸ್ಥಿತಿ ಕ್ಲಿಷ್ಟಕರವಾಗಿದೆ.
ಪ್ರಮುಖ ಬಂಡವಾಳ ವೆಚ್ಚ ಮಾಡುವ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳನ್ನು ತೆಗೆದುಕೊಂಡು ಅನುದಾನ ಒದಗಿಸದೆ ಹೋಗಿದ್ದರು. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳಷ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಆದರೆ ಬಿಲ್ ಗಳನ್ನು ಪಾವತಿಸಿರುವುದಿಲ್ಲ. ವಿದ್ಯುತ್ ಕಂಪನಿಗಳಿಗೆ ಬಾಕಿಯನ್ನು ಪಾವತಿಸುತ್ತಿಲ್ಲ ಎಂದು ವಿರೋಧ ಪಕ್ಷದವರು ಪ್ರಸ್ತಾಪಿಸಿದ್ದಾರೆ. ಹಿಂದಿನ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯುತ್ ಕಂಪನಿಗಳ ಬಲವರ್ಧನೆ ಮಾಡುವಲ್ಲಿ ವಿಫಲವಾಗಿತ್ತು. 5,258 ಕೋಟಿ ರೂ. ಗಳಷ್ಟು ಗ್ರಾಮ ಪಂಚಾಯತಿಗಳ ಬಾಕಿ ವಿದ್ಯುತ್ ಬಿಲ್ಲುಗಳನ್ನು ರಾಜ್ಯ ಸರ್ಕಾರವೇ ಪಿ.ಸಿ.ಕೆ.ಎಲ್. ಮುಖಾಂತರ ಸಾಲ ಪಡೆದು ಪಾವತಿಸುತ್ತಿದೆ. ಇದರ ಜೊತೆ ಹಿಂದಿನ ಸರ್ಕಾರದ ವಿದ್ಯುತ್ ಕಂಪನಿಗಳಿಗೆ ನೀರಾವರಿ ಪಂಪ್ ಸೆಟ್‍ಗಳಿಗೆ ಕೊಡಬೇಕಾದ ಸಹಾಯಧನವನ್ನು ಪಾವತಿಸದ ಕಾರಣ, ರಾಜ್ಯ ಸರ್ಕಾರವೇ 2024-25ನೇ ಸಾಲಿನಲ್ಲಿ 12,785 ಕೋಟಿ ರೂ. ಗಳ ಹಿಂದಿನ ವರ್ಷದ ಬಾಕಿಯನ್ನು ಪಾವತಿಸಲು ಪೂರಕ ಅಂದಾಜಿನಲ್ಲಿ 7,800 ಕೋಟಿ ಸೇರಿದಂತೆ ಒಟ್ಟಾರೆ 20,586 ಕೋಟಿ ರೂ. ಗಳ ಆರ್ಥಿಕ ನೆರವನ್ನು 2024-25 ನೇ ಸಾಲಿನಲ್ಲಿ ನಮ್ಮ ಸರ್ಕಾರ ನೀಡುತ್ತಿದೆ ಎಂದರು.
ಬಂಡವಾಳ ವೆಚ್ಚಗಳು -2025-26 ನೇ ಸಾಲಿನಲ್ಲಿ ಬಂಡವಾಳ ಯೋಜನೆಗಳಿಗೆ ಒಟ್ಟು 83,200 ಕೋಟಿ ರೂ. ಒದಗಿಸಿದ್ದೇವೆ. ಇದರಲ್ಲಿ 71,336 ಕೋಟಿ ರೂ. ಸಂಚಿತ ನಿಧಿಯಿಂದ ಹಾಗೂ 11,864 ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಬಂಡವಾಳ ಯೋಜನೆಗಳಿಗೆ ಉದ್ದೇಶಿಸಿರುವ ರಿಸರ್ವ್ ಫಂಡ್‍ಗಳಿಂದ ಭರಿಸಲಾಗುತ್ತದೆ. ನಮ್ಮ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಗಳಲ್ಲಿನ ವಸತಿ ಶಾಲೆಗಳು, ವಿದ್ಯಾರ್ಥಿ ವೇತನ, ವೈದ್ಯಕೀಯ ಶಿಕ್ಷಣ, ಕೃಷಿ, ತೋಟಗಾರಿಕೆ ಕಾಲೇಜುಗಳು ಸೇರಿದಂತೆ 2025-26 ರಲ್ಲಿ 65043 ಕೋಟಿ ರೂ. ಗಳನ್ನು ಒದಗಿಸಿದೆ. ಒಟ್ಟು ವೆಚ್ಚದಲ್ಲಿ ಶೇ.16 ರಷ್ಟು ಹಂಚಿಕೆಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದೇವೆ. ಬಂಡವಾಳ ವೆಚ್ಚಗಳಿಗೆ ದಾಖಲೆ ಪ್ರಮಾಣದಲ್ಲಿ 83,200 ಕೋಟಿ ರೂ.ಗಳನ್ನು 2025-26ನೇ ಸಾಲಿಗೆ ಒದಗಿಸಿದೆ. ಇದು 2024-25ನೇ ಸಾಲಿನಲ್ಲಿ ಕೊಟ್ಟಿದ್ದ 56,495 ಕೋಟಿ ರೂ. ಗಳಿಗೆ ಹೋಲಿಸಿದರೆ ಶೇ.47.3 ರಷ್ಟು ಹೆಚ್ಚಾಗುತ್ತದೆ. ಜಿ.ಎಸ್.ಡಿ.ಪಿ.ಯಲ್ಲಿ ಬಂಡವಾಳ ವೆಚ್ಚದ ಪಾಲು ಶೇ.2.32 ರಷ್ಟು ಆಗುತ್ತದೆ.
ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು: ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 3 ವರ್ಷಗಳಲ್ಲಿ 54,000 ಕೋಟಿ ಒದಗಿಸಿದೆ. 120 ಕಿ.ಮೀ. ಉದ್ದದ ಫ್ಲೈಓವರ್, ಗ್ರೇಡ್ ಸೆಪರೇಟರ್, 320 ಕಿಮೀ ಉದ್ದದ ಹೊಸ ರಸ್ತೆ, ಡಬಲ್ ಡೆಕ್ಕರ್ ರಸ್ತೆಗಳು, 27,000 ಕೋಟಿ ರೂ.ವೆಚ್ಚದಲ್ಲಿ ಬ್ಯುಸಿನೆಸ್ ಕಾರಿಡಾರ್, ಭೂ-ಸುರಂಗ ರಸ್ತೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇವೆ. ರಾಜ್ಯ ಸರ್ಕಾರ ಈ ವರ್ಷ 3,000 ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 4000 ಕೋಟಿ ರೂ.ಗಳನ್ನು ಒದಗಿಸಿದ್ದು, ಒಟ್ಟಾರೆ 7000 ಕೋಟಿ ರೂ.ಗಳನ್ನು ಬೆಂಗಳೂರಿನ ಅಭಿವೃದ್ಧಿಗೆ ಒದಗಿಸುತ್ತಿದೆ. ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ಉದ್ಯಮಶೀಲತೆ ಅಭಿವೃದ್ಧಿಪಡಿಸಲು 1,000 ಕೋಟಿ ರೂ. ಒದಗಿಸಲಾಗುತ್ತಿದೆ. ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ರಸ್ತೆ, ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ.ಗಳನ್ನು ನೀಡಲಾಗಿದೆ. 2025-26 ರ ಕೇಂದ್ರದ ಬಜೆಟ್ನಲ್ಲಿ 11.21 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚಗಳಿಗೆ ಒದಗಿಸಿದ್ದಾರೆ. 2024-25 ರಲ್ಲಿ 11.11 ಲಕ್ಷ ಕೋಟಿ ರೂ. ನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 9979 ಕೋಟಿ ರೂ ಅಥವಾ ಶೇ. 0.9 ರಷ್ಟನ್ನು ಮಾತ್ರ ಹೆಚ್ಚಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ, ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಬಸ್ಸುಗಳಿಗೆ, ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು, ಮಕ್ಕಳ ಪಾಲಿಗೆ ಆದ್ಯತೆ ನೀಡಲಾಗಿದೆ.
ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳು: 2017-18 ರಲ್ಲಿ ಹಿಂದುಳಿದ ವರ್ಗಕ್ಕೆ 3300 ಕೋಟಿ ರೂ. ಕೊಟ್ಟಿದ್ದರೆ 2022-23 ರಲ್ಲಿ 2372 ಕೋಟಿ ರೂ. ಕೊಡಲಾಯಿತು. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಾವು 2221 ಕೋಟಿ ರೂ. ಅನುದಾನ ನೀಡಿದ್ದರೆ, ಹಿಂದಿನ ಸರ್ಕಾರ 1495 ಕೋಟಿ ರೂ. ನೀಡಿತ್ತು. ವಿರೋಧ ಪಕ್ಷದವರು ಈ ಬಾರಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 4500 ಕೊಟಿ ರೂ ಕೊಡಲಾಗಿದೆ ಎಂದು ಮಾತನಾಡಿದ್ದಾರೆ. ಆದರೆ ವಾಸ್ತವವಾಗಿ 2017-18 ರಲ್ಲಿ ಬಜೆಟ್ ಗಾತ್ರ 1.86 ಲಕ್ಷ ಕೋಟಿಗಳಷ್ಟಿತ್ತು. ಆಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2200 ಕೋಟಿ ರೂ. ಗಳನ್ನು ಒದಗಿಸಿದ್ದೆವು. ಆಗಲೂ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ನಾವು ಶೇ.1.18 ರಷ್ಟು ಅನುದಾನವನ್ನು ನೀಡಿದ್ದೆವು. 2025-26ನೇ ಸಾಲಿನ ಬಜೆಟ್ನಲ್ಲಿ ಶೇ.1.1 ರಷ್ಟು ಮಾತ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಲಾಗಿದೆ ಹಾಗೂ ಈ 5 ಕಲ್ಯಾಣ ಇಲಾಖೆಗಳಿಗೆ ಸರ್ಕಾರ ಈ ಬಾರಿ 50,816 ಕೋಟಿ ರೂ. ಗಳನ್ನು ಕೊಟ್ಟಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 1642 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 2204 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 585 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 29,482 ಕೋಟಿ ರೂ.ಗಳನ್ನು 2022-23 ಕ್ಕಿಂತ ಹೆಚ್ಚಿಗೆ ನೀಡಲಾಗಿದೆ ಎಂದರು.
2017-18 ನೇ ಸಾಲಿನಲ್ಲಿ ನಾನು ಮಂಡಿಸಿದ್ದ ಬಜೆಟ್ ಗಾತ್ರ 1,86,561 ಕೋಟಿ ರೂ. ಆ ವರ್ಷ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆಂದು ಮೀಸಲಿಟ್ಟಿದ್ದ ಅನುದಾನ 16358 ಕೋಟಿ ರೂ. ಇದು ಬಜೆಟ್‍ನ ಶೇ. 8.77 ರಷ್ಟು. ಇದು ನಮ್ಮ ಬದ್ಧತೆ. 2017-18 ರ ನಂತರ ನಿಂತಿದ್ದ ಮಹಿಳೆಯರ, ಮಕ್ಕಳ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಅಭಿವೃದ್ಧಿಯ ರಥವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುನ್ನಡೆಸಲು ಪ್ರಾರಂಭಿಸಿದ್ದೇವೆ. 25-26 ನೇ ಸಾಲಿನ ಬಜೆಟ್‍ನಲ್ಲಿ ಈ 5 ವರ್ಗಗಳಿಗೆ 50,816 ಕೋಟಿ ರೂಗಳನ್ನು ನೀಡಿದ್ದೇವೆ. ಇದು ಬಜೆಟ್‍ನ ಶೇ.12.41 ರμÁ್ಟಗುತ್ತದೆ ಎಂದರು.
ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ 2025-16 ನೇ ಸಾಲಿಗೆ 17,019 ಕೋಟಿ ರೂ. ಗಳನ್ನು ಒದಗಿಸಿದೆ. ಒಟ್ಟು ವೆಚ್ಚದಲ್ಲಿ ಶೇ.4.2 ರಷ್ಟು ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅವರ ಬಜೆಟ್ಟಿನ ಶೇ.2 ರಷ್ಟು ಮಾತ್ರ ಒದಗಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ವಿಶೇಷ ಅನುದಾನ: ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ. ಯೋಜನೆಗಾಗಿ ನಮ್ಮ ಸರ್ಕಾರ ಈ ಬಾರಿ 42,018 ರೂ.ಗಳನ್ನು ಒದಗಿಸಿದೆ. ನಾವು ಪರಿಶಿಷ್ಟ ಸಮುದಾಯಗಳ ಏಳಿಗೆಯನ್ನು ಪ್ರಾಮಾಣಿಕವಾಗಿ ಬಯಸುವವರು. ನಮ್ಮ ಕಾಳಜಿ ಕೇವಲ ಬಾಯಿ ಮಾತಿನದಲ್ಲ. 2020-21 ರಿಂದ 2022-23 ರವರೆಗೆ 3 ವರ್ಷಗಳ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ.ಗಾಗಿ 80,415 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ನಾವು 2023 ರಿಂದ ಈಗ ಮಂಡಿಸಿರುವ ಬಜೆಟ್ವರೆಗೆ 1,15,509 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಬಿಜೆಪಿಯ 3 ವರ್ಷಗಳಿಗೆ ಹೋಲಿಸಿದರೆ ನಾವು 35,094 ಕೋಟಿ ರೂಗಳನ್ನು ಹೆಚ್ಚಿಗೆ ಒದಗಿಸಲಾಗಿದೆ. ಶೇ.43.64 ರಷ್ಟು ಹೆಚ್ಚಿನ ಅನುದಾನವನ್ನು ಒದಗಿಸಿದಂತಾಗುತ್ತದೆ. ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಗೆ ಶೇ.52.5 ರಷ್ಟು ಹೆಚ್ಚು ಅನುದಾನವನ್ನು ಒದಗಿಸಲಾಗಿದೆ. ನಮ್ಮದು ಮುಸ್ಲಿಂ ಬಜೆಟ್ ಅಲ್ಲ – ಸರ್ವೋದಯದ ಬಜೆಟ್ ಎಂದು ತಿಳಿಸಿದರು.
ನಾವು ಸಂವಿಧಾನದ ಆಶಯಗಳ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ಹಾಗಾಗಿ ನಾವು ಸರ್ವೋದಯವಾಗಲಿ ಸರ್ವರಲಿ ಎಂಬುದನ್ನು ನಮ್ಮ ಸಿದ್ಧಾಂತವಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಸಾಮಾನ್ಯ ವರ್ಗಗಳ ಮಾನವ ಅಭಿವೃದ್ಧಿ ಸೂಚ್ಯಂಕ 0.644 ರಷ್ಟಿದೆ. ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನಡುವೆ 0.274 ಅಂಶಗಳ ವ್ಯತ್ಯಾಸವಿದೆ. ಪರಿಶಿಷ್ಟ ಪಂಗಡಗಳಿಗೆ 0.204 ಅಂಶಗಳಷ್ಟು ವ್ಯತ್ಯಾಸವಿದೆ. ಪರಿಶಿಷ್ಟ ಜಾತಿಗಳ ನಡುವೆ 0.154 ಅಂಶಗಳಷ್ಟು ವ್ಯತ್ಯಾಸವಿದೆ.
ಸಮಾಜದ ಒಂದು ವರ್ಗ ಸಂಪೂರ್ಣ ಅಂಗವಿಕಲವಾದರೆ ಇಡೀ ಸಮಾಜವನ್ನು ಮುನ್ನಡೆಸಲು ಹೇಗೆ ಸಾಧ್ಯ? ಅಲ್ಪಸಂಖ್ಯಾತರ ಪ್ರಮಾಣ ಸುಮಾರು ಶೇ.15 ರಷ್ಟಿದೆ. ಇಷ್ಟು ದೊಡ್ಡ ಜನಸಂಖ್ಯೆಯ ಸಮುದಾಯದ ಕಲ್ಯಾಣಕ್ಕೆ ಈ ಬಾರಿಯ ಬಜೆಟ್ನಲ್ಲಿ 4514 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಇದು ಒಟ್ಟಾರೆ ಬಜೆಟ್‍ನಲ್ಲಿ ಶೇ.1.1 ರಷ್ಟು ಮಾತ್ರ.
ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ಕ್ರಮ: ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ಈ ಬಾರಿಯ ಬಜೆಟ್‍ನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆ ಕ್ರಮಗಳಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿಯೂ ಸೇರಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಪ್ರವರ್ಗ-1, 2ಎ ಮತ್ತು 2ಬಿಗಳನ್ನು ಸೇರಿಸಿ ಈ ಕ್ರಮ ತೆಗೆದುಕೊಂಡಿದ್ದೇವೆ. ಈ ವರ್ಗಗಳಲ್ಲಿ ಗುತ್ತಿಗೆದಾರರೇ ಇಲ್ಲವೆನ್ನುವಷ್ಟು ಕಡಿಮೆ ಇದ್ದಾರೆ.
1919 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಸಮಿತಿಯನ್ನು ರಚಿಸಿದರು. ಸಮಿತಿಯು ಮುಸ್ಲಿಂ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶೇ. 82 ರಷ್ಟು, ಬ್ರಾಹ್ಮಣರಿಗೆ ಶೇ. 20 ರಷ್ಟು ಮೀಸಲಾತಿಯನ್ನು [10 ಹುದ್ದೆಗಳಿದ್ದರೆ 2 ಹುದ್ದೆ ಬ್ರಾಹ್ಮಣರಿಗೆ, 8 ಹುದ್ದೆ ಮುಸ್ಲಿಂ ಮತ್ತು ಹಿಂದುಗಳಿಗೆ] ಕೊಡಲು ಶಿಫಾರಸ್ಸು ಮಾಡಿತು. ವಿಶ್ವೇಶ್ವರಯ್ಯನವರ ನಂತರ ಕಾಂತರಾಜ ಅರಸ್ ಅವರು ದಿವಾನರಾಗಿದ್ದಾಗ ಈ ವರದಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದರು. ಸ್ವಾತಂತ್ರ್ಯೋತ್ತ ಭಾರತದಲ್ಲಿ ಕರ್ನಾಟಕ ಸರ್ಕಾರಗಳು ಸಂವಿಧಾನದ ಆರ್ಟಿಕಲ್ 15[4], 16[4] ರ ಪ್ರಕಾರ ಮೀಸಲಾತಿಯನ್ನು ನೀಡುತ್ತಾ ಬಂದಿವೆÉ. ಯಾಕೆಂದರೆ ಈ ಸಮುದಾಯವು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವೆ ಎಂಬ ಕಾರಣದಿಂದಲೆ ಮೀಸಲಾತಿಯನ್ನು ಕೊಡಲಾಗಿದೆ.
ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಮೀಸಲಾತಿಯನ್ನು ಕೊಡಬಹುದೆಂದು ರಾಜ್ಯದ ಹಲವು ಸಮಿತಿಗಳು ಹಾಗೂ ಆಯೋಗಗಳು ಶಿಫಾರಸ್ಸು ಮಾಡಿವೆ. ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಆಯೋಗ ಎಂದು ಕರೆಸಿಕೊಳ್ಳುವ ಎಲ್.ಜಿ.ಹಾವನೂರ ರವರ ಆಯೋಗವು 4 ಪ್ರವರ್ಗಗಳನ್ನು ಗುರುತಿಸಿದೆ. 1) ಹಿಂದುಳಿದ ಸಮುದಾಯಗಳು 2) ಹಿಂದುಳಿದ ಜಾತಿಗಳು 3) ಹಿಂದುಳಿದ ಬುಡಕಟ್ಟುಗಳು 4) ವಿಶೇಷ ಸಮುದಾಯಗಳು ಎಂದು ವ್ಯಾಖ್ಯಾನಿಸಿ ವರದಿಯನ್ನು ಹಾವನೂರ ಆಯೋಗ ಕೊಟ್ಟಿದೆ. ಇದನ್ನು ಆಧರಿಸಿ, ಸರ್ಕಾರಿ ಆದೇಶ ಸಂಖ್ಯೆ: ಡಿಪಿಎಆರ್ 01 ಎಸ್‍ಬಿಸಿ 1977, ದಿನಾಂಕ: 04.03.1977 ರ ಆದೇಶದ ಪ್ರಕಾರ ಮುಸ್ಲಿಮರನ್ನು ಹಿಂದುಳಿದ ಸಮುದಾಯಗಳ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಲಾಗಿದೆ ಎಂದು ತಿಳಿಸಿದರು.
ಓ. ಚಿನ್ನಪ್ಪರೆಡ್ಡಿ ಆಯೋಗವು ಕೆಟಗರಿ-1, ಕೆಟಗರಿ-2ಎ, ಕೆಟಗರಿ-2ಬಿ, ಕೆಟಗರಿ-3ಎ, ಕೆಟಗರಿ-3ಬಿ ಮತ್ತು ಕೆಟಗರಿ-4 ಎಂದು ಗುರುತಿಸಿತು. ಆಗ, ಮುಸ್ಲಿಂ ಸಮುದಾಯವನ್ನು ಪ್ರತ್ಯೇಕವಾಗಿ 2ಬಿ ವರ್ಗದಲ್ಲಿ ಗುರುತಿಸಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತು. ಆನಂತರದ ಪೆÇ್ರ. ರವಿವರ್ಮ ಕುಮಾರ್ ಆಯೋಗವು ಕೆಟಗರಿ-1, ಕೆಟಗರಿ-2ಎ, ಕೆಟಗರಿ-2ಬಿ, ಕೆಟಗರಿ-3ಎ, ಮತ್ತು ಕೆಟಗರಿ-3ಬಿ ಗಳೆಂದು 5 ಪ್ರವರ್ಗಗಳಾಗಿ ಗುರುತಿಸಿತು. ಇವತ್ತಿಗೂ ಇದೇ ಪದ್ಧತಿ ಮುಂದುವರೆದಿದೆ. ಪೆÇ್ರ. ರವಿವರ್ಮ ಕುಮಾರ್ ಆಯೋಗವು ಕೂಡ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಕೆಟಗರಿ-2ಬಿ ನಲ್ಲಿ ಸೇರಿಸಿದೆ. ಹಾಗಾಗಿ, ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಗಳಿಗೆ ಸಂಬಂಧಪಟ್ಟ ಸಮಿತಿಗಳು ಹಾಗೂ ಆಯೋಗಗಳು ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಗುರುತಿಸಿವೆ. ಒಟ್ಟಾರೆ ನಮ್ಮ ಸರ್ಕಾರವು ನಾಡಿನ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತಿದೆ. ಸುಸ್ಥಿರ ಅಭಿವೃದ್ಧಿಯತ್ತ ಕರ್ನಾಟಕವನ್ನು ಮುನ್ನಡೆಸುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ರಾಜಸ್ವ ಕೊರತೆಯನ್ನು ಹೋಗಲಾಡಿಸಿ ರೆವಿನ್ಯೂ ಸಪ್ರ್ಲಸ್ ಬಜೆಟ್ ಮಂಡಿಸುವುದೂ ಕೂಡ ನಮ್ಮ ಧ್ಯೇಯ. ಇದು ಸರ್ವರ ಬಜೆಟ್, ಹಾಗೆಯೇ ಸರ್ವೋದಯದ ಬಜೆಟ್ ಎಂದು ತಿಳಿಸಿದರು.
ಈ ಬಾರಿ ಆಯವ್ಯಯದಲ್ಲಿ ಅನೇಕ ಹೊಸ ಕಾರ್ಯಕ್ರಮಗಳನ್ನು ತಂದಿದ್ದೇವೆ. ಪಶುಪಾಲಕರ ಕುರಿ, ಮೇಕೆ, ಎತ್ತು, ಹಸು ಆಕಸ್ಮಿಕವಾಗಿ ಮೃತಪಟ್ಟರೆ ಪರಿಹಾರ ಧನ ಹೆಚ್ಚು ಮಾಡುವುದರಿಂದ ಹಿಡಿದು, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ತಂದಿದ್ದೇವೆ. ಕೃಷಿ ಕ್ಷೇತ್ರಕ್ಕೆ ಕೊಡಲಾಗಿತ್ತು. ಈ ಬಾರಿ ನಾವು ಸಮಗ್ರ ಕೃಷಿ ಕ್ಷೇತ್ರಕ್ಕೆ 51,339 ಕೋಟಿ ರೂ.ಗಳನ್ನು ಕೊಟ್ಟಿದ್ದೇವೆ. 2022-23 ರಲ್ಲಿ ಮಹಿಳಾ ಅಭಿವೃದ್ಧಿಗೆ 43,188 ಕೋಟಿ ರೂ. ಕೊಡಲಾಗಿತ್ತು. 2025-26 ರಲ್ಲಿ 94,084 ಕೋಟಿ ರೂ. ಕೊಟ್ಟಿದ್ದೇವೆ. ಮಕ್ಕಳ ಬಜೆಟ್ಟಿಗಾಗಿ 2022-23 ರಲ್ಲಿ 40,944 ಕೋಟಿ ರೂ. ಗಳನ್ನು ಕೊಡಲಾಗಿತ್ತು. 2025-26 ರಲ್ಲಿ 62,033 ಕೋಟಿ ರೂ. ಕೊಟ್ಟಿದ್ದೇವೆ. ಎಂದರು.
ಬಜೆಟ್‍ನ್ನು ಶ್ಲಾಘಿಸಿದ ಎಲ್ಲ ತಜ್ಞರಿಗೆ, ಮಾಧ್ಯಮವರ್ಗದವರಿಗೆ, ಇμÉ್ಟೂಂದು ಪ್ರಮಾಣದ ತೆರಿಗೆಯನ್ನು ಪಾವತಿಸುತ್ತಿರುವ ನಾಡಿನ ಜನರಿಗೆ, ಇಂತಹ ಬಜೆಟ್‍ನ್ನು ರೂಪಿಸಲು ನಾಡಿನ ವಿವಿಧ ಸಂಘ ಸಂಸ್ಥೆಗಳ ಬಂದು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ಒಟ್ಟಾರೆ 4,09,599 ಕೋಟಿಯ ಆಯವ್ಯಯಕ್ಕೆ ಅಂಗೀಕಾರ ನೀಡಬೇಕೆಂದು ಸದನವನ್ನು ಕೋರಿದರು