ಬೆಂಗಳೂರು:
ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ನಿಮ್ಮ ಸಂಪುಟದ ಸಹೋದ್ಯೋಗಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ನೀಡಿರುವ ಹೇಳಿಕೆ ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದೆ. ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡದೆ ಸತಾಯಿಸುತ್ತಿರುವ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬ್ಬಲ್ ಎಂಜಿನ್ ಸರ್ಕಾರಗಳು ಕನ್ನಡಿಗರಿಗೆ ದ್ರೋಹ ಎಸಗಿವೆ ಎಂದು ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮೇಕೆದಾಟು ಕುರಿತಂತೆ ನಿಡಿರುವ ಹೇಳಿಕೆಯನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ಅವರಿಗೆ ಬರೆದಿರುವ ಪತ್ರದ ಸಾರಾಂಶ ಈ ಕೆಳಗಿನಂತಿದೆ ನೋಡಿದೆ.
ಮೋದಿಗೆ ಸಿದ್ದು ಪತ್ರದ ಸಾರಾಂಶ
2022 ರ ಫೆಬ್ರವರಿ 5 ರಂದು ಸಚಿವ ಶೇಖಾವತ್ ಅವರು ನೀಡಿದ ಹೇಳಿಕೆಯಲ್ಲಿ, “ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಒಟ್ಟಿಗೇ ಕುಳಿತು ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಎರಡೂ ರಾಜ್ಯಗಳೂ ಒಟ್ಟಿಗೆ ಕುಳಿತುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾತ್ರ ನಾವು ಒದಗಿಸಿಕೊಡುತ್ತೇವೆ”ಎಂದು ಹೇಳಿದ್ದಾರೆ. ಎರಡು ರಾಜ್ಯಗಳೇ ಕುಳಿತು ಮಾತುಕತೆ ಆಡಿ ಬಗೆಹರಿಸಿ ಕೊಳ್ಳುವುದಾದರೆ, ಕೇಂದ್ರದ ಜಲ ಪ್ರಾಧಿಕಾರಗಳು ಮತ್ತಿತರ ಕೇಂದ್ರ ಮಟ್ಟದ ವ್ಯವಸ್ಥೆಗಳ ಅಗತ್ಯವಾದರೂ ಏನು ? ಹೀಗಾಗಿ ಸಚಿವರ ಮಾತುಗಳು ಅತ್ಯಂತ ಬೇಜವಾಬ್ದಾರಿತನದ್ದಾಗಿವೆ.
ಕೇಂದ್ರ ಸಚಿವರ ಈ ಮಾತು ತಮಿಳುನಾಡನ್ನು ಓಲೈಸುವ ಮತ್ತು ಕನ್ನಡಿಗರ ಹಾದಿ ತಪ್ಪಿಸುವ ರಾಜಕೀಯ ಹೇಳಿಕೆಯಂತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಮಿಳುನಾಡಿಗೆ ಬಿಡಬೇಕಾದಷ್ಟು ನೀರನ್ನು ಹರಿಸಿದ ಬಳಿಕ ಉಳಿದ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಕರ್ನಾಟಕದ ಕಾನೂನಾತ್ಮಕ, ನೈತಿಕ ಮತ್ತು ತಾಂತ್ರಿಕ ಹಕ್ಕು.
ಬೆಂಗಳೂರು ನಗರದ ಜನಸಂಖ್ಯೆ 1.5 ಕೋಟಿ ದಾಟಿದೆ. ಉಳಿದ 12 ಜಿಲ್ಲೆಗಳ 3.5 ಕೋಟಿ ಜನರ ವ್ಯಾಪ್ತಿಯಲ್ಲಿ ಕಾವೇರಿ ನೀರು ವಿತರಣೆಯಾಗುತ್ತಿದೆ. ದೇಶದ ಒಟ್ಟು ಆರ್ಥಿಕತೆ ಮತ್ತು ದೇಶದ ಒಟ್ಟು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಶೇ 30 ರಷ್ಟು ಮಂದಿಗೆ ಮಾತ್ರ ಕಾವೇರಿ ಕುಡಿಯುವ ನೀರಿನ ಲಭ್ಯತೆ ಇದೆ. ಬೇಸಿಗೆ ಮತ್ತು ಬರಗಾಲದ ಸ್ಥಿತಿಯಲ್ಲಿ ಬೆಂಗಳೂರು ನಗರಿಗರಿಗೆ ಕುಡಿಯುವ ನೀರಿನ ಅಭಾವ ಬಹಳ ಸಂಕಷ್ಟ ಸೃಷ್ಟಿಸಿದೆ. ಈ ಸಂಕಷ್ಟವನ್ನು ಪರಿಹರಿಸಲು ಮೇಕೆದಾಟು ಯೋಜನೆ ಜಾರಿ ಆಗುವುದು ಅತ್ಯಗತ್ಯ ಮತ್ತು ಮುಂದಿನ 50 ವರ್ಷಗಳ ನೀರಿನ ಅಗತ್ಯವನ್ನು ಈ ಯೋಜನೆ ಪೂರೈಸುತ್ತದೆ.
ಇಷ್ಟು ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಡದೆ ಸತಾಯಿಸುತ್ತಿರುವುದಲ್ಲದೆ ಸಚಿವ ಶೇಖಾವತ್ ಅವರು ನಮ್ಮ ಕುಡಿಯುವ ನೀರಿನ ಮಹತ್ವವನ್ನು ಅರಿಯದೆ ಅತ್ಯಂತ ನಿರ್ಲಕ್ಷ್ಯತನದಿಂದ ಮಾತನಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಕೂಡಲೇ ಕೇಂದ್ರ ಸರ್ಕಾರ ಕಾಲಹರಣ ಮಾಡದೆ ತಕ್ಷಣ ಪರಿಸರ ಅನುಮತಿ ಕೊಡಬೇಕು. ಇಲ್ಲದ ನೆಪಗಳನ್ನು ಹೇಳಿಕೊಂಡು ರಾಜಕಾರಣ ಮಾಡದೆ ಮೇಕೆದಾಟು ಯೋಜನೆ ಜಾರಿ ಆಗಿ ಕೆಲಸ ಆರಂಭಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯನವರು ಪತ್ರದಲ್ಲಿ ಬರೆದಿದ್ದಾರೆ.