ಬೆಂಗಳೂರು:
ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಪ್ರಕಟಿಸುವಂತೆ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನ ಮಂಡಲದ ಉಭಯ ಸದನಗಳ ಹಿರಿಯ ಸದಸ್ಯರ ಸಭೆಯ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
“ರಾಜ್ಯದ ವಿವಿಧ ಜಿಲ್ಲೆಗಳು ಈ ವರ್ಷ ಮೂರು ಬಾರಿ ಪ್ರವಾಹದಿಂದ ಹಾನಿಗೀಡಾಗಿವೆ, ಈ ವರೆಗೂ ನಷ್ಟಕ್ಕೊಳಗಾದ ಜನರಿಗೆ ಸೂಕ್ತ ಪರಿಹಾರ ನೀಡಿಲ್ಲ. ಜೊತೆಗೆ ಅನೇಕ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿಲ್ಲ, ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ಗೃಹ ನಿರ್ಮಾಣ ಯೋಜನೆಗಳಿಗೆ ಅಗತ್ಯ ಹಣ ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿ ಸರ್ಕಾರ ತಮ್ಮ ಪಕ್ಷದ ಅರ್ಜಿದಾರರನ್ನು ಗುರುತಿಸಿ ಹಣ ಬಿಡುಗಡೆ ಮಾಡುತ್ತಿದೆ. ಇತರೆ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರ ಅರ್ಜಿಗಳನ್ನು ಬಾಕಿ ಇಡಲಾಗಿದೆ. ಇದು ಬಡಜನರಿಗೆ ಮಾಡುತ್ತಿರುವ ದ್ರೋಹ.
ರಾಜ್ಯ ಸರ್ಕಾರ ಮತ್ತೆ ಈ ಬಾರಿಯ ಅಧಿವೇಶನದಲ್ಲಿ ಕಾರ್ಮಿಕ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯಿದೆಗಳ ಮಂಡನೆ ಮಾಡಲಿದ್ದು, ಅವುಗಳ ಬಗ್ಗೆ ದೀರ್ಘವಾಗಿ ಚರ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಇಂತಹ ಜನವಿರೋಧಿ, ರೈತವಿರೋಧಿ ಕಾಯ್ದೆಗಳ ಜಾರಿಗೆ ನಾವು ಅವಕಾಶ ನೀಡುವುದಿಲ್ಲ ಎಂದರು.
ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದೆ. ನೌಕರರ ಸಂಬಳ, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿ ನೀಡಲು ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಈ ಬಾರಿಯ ಅಧಿವೇಶನದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸದ್ಯ ನೀತಿಸಂಹಿತೆ ಜಾರಿಯಲ್ಲಿದ್ದು, ನಾಳೆಯಿಂದ ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಈ ವೇಳೆ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್ ತಡೆ ಕಾಯ್ದೆಗಳನ್ನು ಜಾರಿಗೆ ತಂದರೆ ಮತದಾರರ ಮೇಲೆ ಪರಿಣಾಮ ಬೀರಲಿದ್ದು, ನೀತಿಸಂಹಿತೆಯ ಉಲ್ಲಂಘನೆಯಾಗಲಿದೆ ಎಂದರು.
ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ನಮ್ಮದು ಜಾತ್ಯಾತೀತ ಪಕ್ಷ ಎನ್ನುವ ಜೆಡಿಎಸ್ ಕೋಮುವಾದಿಗಳ ಪರವಾಗಿ ಮತ ಚಲಾಯಿಸುತ್ತದೋ, ವಿರುದ್ಧವಾಗಿ ಮತ ಚಲಾಯಿಸುತ್ತದೋ ಎಂಬುದನ್ನು ನೋಡಲು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈಗಲೇ ರಾಜೀನಾಮೆ ನೀಡದಂತೆ ಹೇಳಿದ್ದೇನೆ ಎಂದು ತಿಳಿಸಿದರು.