Home ರಾಜಕೀಯ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹ

ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹ

48
0

ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಪತ್ರ ಬರೆದ ಹಿನ್ನೆಲೆಯಲ್ಲಿ ಆಗ್ರಹ

ಬೆಂಗಳೂರು:

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ಸಚಿವ ಕೆ.ಎಸ್‌ ಈಶ್ವರಪ್ಪ ಪತ್ರದ ಮೂಲಕ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಮುಖ್ಯಮಂತ್ರಿಯನ್ನು ವಜಾಗೊಳಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.

ಈ ಕುರಿತಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಗಳ ವಿರುದ್ಧ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು ರಾಜ್ಯದ ಆಡಳಿತ ಕುಸಿದು ಬಿದ್ದಿರುವುಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರು ತಕ್ಷಣ ಮಧ್ಯೆಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕನಾಗಿ ನಾನು ಮಾಡುತ್ತಾ ಬಂದಿರುವ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಮಾತಿಗೆ ಬದ್ದರಾಗಿ ಉಳಿಯಬೇಕು.

ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಸಾರಿದ್ದಾರೆ ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳು ಕೇವಲ ಗ್ರಾಮೀಣ ಅಭಿವೃದ್ದಿ ಇಲಾಖೆಯೊಂದಕ್ಕೆ ಸಂಬಂಧಿಸಿದ್ದಲ್ಲ, ಇದು ಸರ್ಕಾರದ ಪ್ರತಿಯೊಂದು ಇಲಾಖೆಯೊಳಗಿನ ಕರ್ಮಕಾಂಡ. ಬಿಜೆಪಿ ವರಿಷ್ಠರು ಈಶ್ವರಪ್ಪನವರ ಬಾಯಿಮುಚ್ಚಿಸಲು ಪ್ರಯತ್ನಿಸದೆ ಇತರ ಸಚಿವರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಬೇಕು.

ಮುಖ್ಯಮಂತ್ರಿಗಳ ವಿರುದ್ಧ ಈಶ್ವರಪ್ಪನವರು ರಾಜ್ಯಪಾಲರಿಗೆ ‌ಮಾತ್ರ ಆರೋಪ ಪಟ್ಟಿ ಸಲ್ಲಿಸದೆ, ಅದರ ಪ್ರತಿಯನ್ನು ಪ್ರಧಾನಿ ಮೋದಿ ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕಳಿಸಿದ್ದಾರೆ. ಅವರೆಲ್ಲರೂ ಆರೋಪ ಪಟ್ಟಿ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಾಜ್ಯ ಸರ್ಕಾರದ‌ ಖಜಾನೆ ಖಾಲಿಯಾಗಿರುವುದಕ್ಕೆ ಕೊರೊನಾ ವೈರಸ್ ಕಾರಣ ಅಲ್ಲ, ಈ ಸರ್ಕಾರಕ್ಕೆ ಅಂಟಿರುವ ಭ್ರಷ್ಟಾಚಾರದ ವೈರಸ್ ಕಾರಣ ಎನ್ನುವುದನ್ನು ಈಶ್ವರಪ್ಪನವರ ತನ್ನ ಸಂಶೋಧನೆ‌ ಮೂಲಕ ಬಹಿರಂಗ ಗೊಳಿಸಿದ್ದಾರೆ. ನಮ್ಮ ಸರ್ಕಾರ 10% ಸರ್ಕಾರ ಎಂದು ಆರೋಪಿಸಿದ್ದ ಪ್ರಧಾನಮಂತ್ರಿಯವರೇ, ನಿಮ್ಮದೇ ಸಚಿವರು ನಿಮಗೆ ಕಳಿಸಿರುವ ನಿಮ್ಮ ಸರ್ಕಾರದ ಜಾತಕಪತ್ರವನ್ನು ಪರಿಶೀಲಿಸಿ ನೀವೇ ರಾಜ್ಯಸರ್ಕಾರಕ್ಕೆ ಭ್ರಷ್ಟಾಚಾರದ ರೇಟಿಂಗ್ ಕೊಟ್ಟುಬಿಡಿ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, “ನಾ ಖಾವುಂಗಾ, ನಾ ಖಾನೆ ದೂಂಗಾ” ಎಂಬ ನಿಮ್ಮ ಜಗದ್ವಿಖ್ಯಾತ ಘೋಷಣೆಯನ್ನು ಬ “ಮೈ ಬಿ ಖಾವೂಂಗಾ, ತುಮ್ ಬಿ ಖಾವೋ” ಎಂದು ಬದಲಿಸಿ ಬಿಡಿ. ಆಪರೇಷನ್ ಕಮಲ‌ ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ನೀಡಿರುವುದು, ರಾಜ್ಯದ ಬಿಜೆಪಿ ಸರ್ಕಾರ ಆಪರೇಷನ್ ಕಮಲ ಎಂಬ‌ ಅನೈತಿಕ ಚಟುವಟಿಕೆಯ ಅಕ್ರಮ ಶಿಶು ಎನ್ನುವ ನಮ್ಮ ಆರೋಪವನ್ನು ಪುಷ್ಠೀಕರಿಸಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಇಲಾಖೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲ ವಜುಭಾಯ್ ವಾಲಾ ಸೇರಿ ಬಿಜೆಪಿ ಹೈಕಮಾಂಡ್ಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ತಮ್ಮ ಇಲಾಖೆಗೆ ಬಿಡುಗಡೆಯಾದ 1,200 ಕೋಟಿ ರೂ.ಅನುದಾನ ಕುರಿತು ಹಸ್ತಕ್ಷೇಪ ಮಾಡುತ್ತಿದ್ದು, ಕೂಡಲೇ ಮಧ್ಯಪ್ರವೇಶ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here