
Siddaramaiah will be Bus Conductor for some time on June 11
ಬೆಂಗಳೂರು:
ಶಕ್ತಿ ಯೋಜನೆಗೆ ವಿಭಿನ್ನವಾಗಿ ಚಾಲನೆ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅದರಂತೆ ಜೂನ್ 11ರಂದು ಬೆಳಗ್ಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ವಿಧಾನಸೌಧಕ್ಕೆ ತೆರಳುವ ರೂಟ್ ನಂಬರ್ 43ರ ಬಸ್ಸಿನಲ್ಲಿ ಕೆಲಹೊತ್ತು ಸಿಎಂ ಕಂಡಕ್ಟರ್ ಆಗಿ ಮಹಿಳೆಯರಿಗೆ ಶೂನ್ಯದರದ ಟಿಕೆಟ್ ನೀಡಲಿದ್ದಾರೆ. ವಿಧಾನಸೌಧದಿಂದ ಮೆಜೆಸ್ಟಿಕ್ ಗೆ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾ ಕೆಲಹೊತ್ತು ಪ್ರಯಾಣಿಸಲಿದ್ದಾರೆ.
ಅನಂತರ ವಿಧಾನಸೌಧದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳ ಉದ್ಘಾಟನೆಯೂ ಸಹ ವಿಭಿನ್ನವಾಗಿರಬೇಕು ಎಂಬ ಆಲೋಚನೆಯಲ್ಲಿರುವ ಸಿದ್ದರಾಮಯ್ಯ ಅವರ ಥಿಂಕ್ ಟ್ಯಾಂಕ್ ಈ ಶೈಲಿಯಲ್ಲಿ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.