Home ರಾಜಕೀಯ 5 ವರ್ಷವೂ ರಾಜ್ಯಕ್ಕೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಮಹದೇವಪ್ಪ

5 ವರ್ಷವೂ ರಾಜ್ಯಕ್ಕೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಮಹದೇವಪ್ಪ

19
0
Siddaramaiah will be Chief Minister of state for 5 years: Karnataka Minister Mahadevappa
Siddaramaiah will be Chief Minister of state for 5 years: Karnataka Minister Mahadevappa

ಮೈಸೂರು:

ಮುಂದಿನ 5 ವರ್ಷದವರೆಗೂ ಸಿದ್ದರಾಮಯ್ಯ ಅವರೇ ರಾಜ್ಯ ಮುಖ್ಯಮಂತ್ರಿಯಾಗಿರಲಿದ್ದಾರೆಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಅವರು ಹೇಳಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಕುರಿತು ಸಚಿವ ಎಂ.ಬಿ.ಪಾಟೀಲ್ ಮತ್ತು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಎನ್ನುವುದಷ್ಟೆ ಚರ್ಚೆಯಾಗಿದೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಮುಂದುವರಿಯುತ್ತಾರೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿರುವುದರಲ್ಲಿ ತಪ್ಪಿಲ್ಲ. ಮತ ಹಾಕುವವರು ನಾವು, ಅಧಿಕಾರ ಅನುಭವಿಸುವವರು ಬೇರೆಯವರು ಎಂಬ ನೋವು ದಲಿತರಲ್ಲಿದೆ.

ಏಕೆಂದರೆ ಈ ಬಾರಿ ಹೆಚ್ಚು ದಲಿತರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ತುಳಿತಕ್ಕೊಳಗಾದವರಿಗೆ ಅವಕಾಶ ಸಿಗಬೇಕು. ನನಗೂ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಏಕೆಂದರೆ ನಾನು ಬುದ್ಧನಲ್ಲ, ಆತನ ಅನುಯಾಯಿ ಅಷ್ಟೇ ಎಂದು ಹೇಳಿದರು.

ಜನರ ಮೂಲ ಹಕ್ಕುಗಳಿಗೆ ಧಕ್ಕೆ ಆಗದಂತೆ ಹಿಂದಿನ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರೆಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು. ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಮುಂತಾದವು ಸಂವಿಧಾನದಲ್ಲೇ ಅಡಕವಾಗಿದೆ. ಯಾವ ವ್ಯಕ್ತಿ, ಯಾವುದೇ ಧರ್ಮವನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ತನ್ನ ಧರ್ಮದ ಪ್ರಚಾರ ಮಾಡುವುದಕ್ಕೂ ಅಡ್ಡಿ ಇಲ್ಲ. ಆದರೆ ಬಲವಂತವಾಗಿ ಮತಾಂತರ ಮಾಡಲು ಅವಕಾಶ ಇಲ್ಲ. ಇದಕ್ಕೆ ಪ್ರತ್ಯೇಕ ಕಾಯ್ದೆ ಬೇಕಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಮಾಡಿರುವ ಹೊಂದಾಣಿಕೆ ಆರೋಪ ಕುರಿತು ಮಾತನಾಡಿ, ಸಿದ್ದರಾಮಯ್ಯ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರೆ ಅಷ್ಟುದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 46 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿರಲಿಲ್ಲ. ಸಿದ್ದರಾಮಯ್ಯನವರಿಗೆ ‘ಅಡ್ಜಸ್ಟ್‌ಮೆಂಟ್’ ಗೊತ್ತಿಲ್ಲ, ಅವರು ಅಂತಹ ರಾಜಕೀಯ ನಾಯಕರಲ್ಲ. ಇಂತಹ ಕೀಳುಮಟ್ಟದ ರಾಜಕಾರಣವನ್ನು ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ ಎಂದರು.

LEAVE A REPLY

Please enter your comment!
Please enter your name here