ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಬಜೆಟ್ ಮಂಡನೆ ಮಾಡಿದ್ದಾಗ ಸದನಕ್ಕೆ ಬರುವಾಗ ಕಿವಿಗೆ ಹೂವು ಇಟ್ಟುಕೊಂಡು ಸಿದ್ದರಾಮಯ್ಯ ಬಂದಿದ್ದರು. ಈಗ ಅದೇ ಹೂವನ್ನ 7 ಕೋಟಿ ಜನರ ಕಿವಿಗೆ ಇಟ್ಟಿದ್ದಾರೆ. ಈ ಬಜೆಟ್ ನೋಡಿದರೆ ‘ನಾಳೆ ಬಾ ಸರಕಾರ ‘ ದಂತೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ಪ್ರಸಕ್ತ ಸಾಲಿನ ಆಯವ್ಯಯದ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು ಕೇಂದ್ರ ಸರಕಾರಕ್ಕೆ ಸಿದ್ದರಾಮಯ್ಯ ಅವರು ನಿತ್ಯವೂ ಬೈತಾರೆ. ಆದರೆ ಅದೇ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಅನ್ನುತ್ತಾರೆ. ಬಜೆಟ್ ಪುಸ್ತಕದ ಪ್ರತಿ ಪುಟದಲ್ಲಿಯೂ ಕೇಂದ್ರ ಸರಕಾರವನ್ನು ಬೈದಿದ್ದಾರೆ. ಒಂದು ಸುಳ್ಳನ್ನು ಸತ್ಯ ಮಾಡಬೇಕಾದಾರೆ ನೂರು ಬಾರಿ ಸುಳ್ಳು ಹೇಳು ಎನ್ನುವ ಮಾತಿದೆ. ಅದೇ ಕೆಲಸವನ್ನು ಈಗ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಇಂತಹ ಕೆಟ್ಟ ಸರಕಾರ ಈ ದೇಶದಲ್ಲಿ ಯಾವತ್ತೂ ಬಂದಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಜನರ ಮೇಲೆ ಸಿಎಂಗೆ ಸಿಟ್ಟಿದೆ, ಬಜೆಟ್ ನಲ್ಲಿ ಅದು ಕಾಣುತ್ತಿದೆ:
ನಾಡಿನ ಜನರ ಮೇಲೆ ಸಿದ್ದರಾಮಯ್ಯಗೆ ಆಕ್ರೋಶ ಇದ್ದಂತೆ ಇದೆ. ಆ ಸಿಟ್ಟನ್ನು ಬಜೆಟ್‌ನಲ್ಲಿ ತೋರಿಸಿದ್ದಾರೆ. ಇಷ್ಟೇ ಈ ಬಜೆಟ್ ನ ಸಾರಾಂಶ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯಗೆ ಜೆಡಿಎಸ್, ಬಿಜೆಪಿ, ಕೇಂದ್ರದ ಮೇಲೆ ಇಷ್ಟು ದಿನ ಆಕ್ರೋಶ ಇತ್ತು ಅಂತ ಅಂದುಕೊಂಡಿದ್ದೆ. ಆದರೆ ಈ ಬಜೆಟ್ ನೋಡಿದರೆ ಸಿದ್ದರಾಮಯ್ಯ ಅವರಿಗೆ 7 ಕೋಟಿ ಕನ್ನಡಿಗರ ಮೇಲೆ ಆಕ್ರೋಶ ಇದೆ ಅಂತ ಅರ್ಥವಾಗುತ್ತದೆ ಎಂದರು ಕುಮಾರಸ್ವಾಮಿ ಅವರು.