ಬೆಂಗಳೂರು:
ರಾಜ್ಯದಲ್ಲಿ ಸಿದ್ದರಾಮಯ್ಯರ ಸರ್ಕಾರ ಮಾಡಿರೋ ಅನಾಹುತ ನೋಡಿದ್ರೆ ಅದು ಸಂಪೂರ್ಣ ರೈತ ವಿರೋಧಿ ನಿಲುವನ್ನು ತೆಗೆದುಕೊಂಡಿದೆ ಎಂದು ರಾಜ್ಯದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆಕ್ಷೇಪಿಸಿದ್ದಾರೆ.
ಏಳು ಗಂಟೆ ಕೊಡಬೇಕಿದ್ದ ವಿದ್ಯುತ್ ಎರಡು ಗಂಟೆಗೆ ಇಳಿಸಿದ್ದಾರೆ. ಬಿತ್ತನೆ ಬೀಜ ಹಾಳಾಗಿದೆ, ಗೊಬ್ಬರ ಸಮಸ್ಯೆ ಇದೆ. ಇದರ ನಡುವೆ ಲೋಡ್ ಶೆಡ್ಡಿಂಗ್ ಜಾರಿಯಿಂದ ಬೆಳೆ ಉಳಿಸಿಕೊಳ್ಳಲು ಆಗಿಲ್ಲ ಎಂದಿರುವ ಅವರು, ಹೇಗಾದರೂ ವಿದ್ಯುತ್ ಖರೀದಿ ಮಾಡಿ, ಏನು ಬೇಕಾದ್ರೂ ಮಾಡಿ; ಆದರೆ, ರೈತರ ಬಾಳಲ್ಲಿ ಚೆಲ್ಲಾಟ ಆಡೋದು ಸರಿಯಲ್ಲ ಎಂದಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ರೈತರಿಗೆ ಅನ್ಯಾಯ ಆಗಿದೆ ಅಂತ ಹೇಳ್ತಿದ್ದಾರೆ. ಇದನ್ನು ಇಂಧನ ಸಚಿವರು ಒಪ್ಪಿಕೊಳ್ತಿಲ್ಲ. ಇಲಾಖೆಯಲ್ಲಿ ಸಮನ್ವಯದ ಕೊರತೆ ಇದೆ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಮತ್ತು ಡಿಸಿಎಂ ಡಿಕೆಶಿವಕುಮಾರ್ ಈ ಕಡೆ ಗಮನ ಹರಿಸಬೇಕು. ಇಲ್ಲದಿದ್ದರೆ, ರೈತರಿಗೆ ಆಗುವ ಅನ್ಯಾಯಕ್ಕೆ, ಸಮಸ್ಯೆಗೆ, ರೈತರ ಆತ್ಮಹತ್ಯೆಗೆ ಸಿಎಂ, ಡಿಸಿಎಂ ನೇರ ಕಾರಣ ಎಂದು ಟೀಕಿಸಿದ್ದಾರೆ.
ರೈತರ ಸಮಸ್ಯೆ ಬಗೆಹರಿಸದಿದ್ದರೆ ಬಿಜೆಪಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದೆ ಎಂದೂ ಎಚ್ಚರಿಸಿದ್ದಾರೆ.
ಮಹಿಷ ದಸರ ಆಚರಣೆಗೆ ಅವಕಾಶ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಯಾವ್ಯಾವ ದಸರಾಗೆ ಅವಕಾಶ ಕೊಟ್ಟಿದೆ ಗೊತ್ತಿಲ್ಲ. ರಾಕ್ಷಸ ದಸರಾಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ನವರು ನ್ಯಾಯಯುತ, ಧರ್ಮದ ವ್ಯವಸ್ಥೆ ಹಾಳು ಮಾಡ್ತಿದ್ದಾರೆ. ಚಾಮುಂಡಿ ದಸರಾ ಹೆಮ್ಮೆಯ ವಿಚಾರ. ಅದಕ್ಕೆ ಅವಕಾಶ ಮಾಡಿಕೊಡಬೇಕು. ಅದ್ಯಾವುದೋ ಬೇರೆ ದಸರಾ ಮಾಡ್ತೀನಿ ಅಂತ ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.