ಬೆಂಗಳೂರು:
ನರೇಂದ್ರ ಮೋದಿಜಿ ಅವರ ನೇತೃತ್ವದ ಬಿಜೆಪಿಯ ಕೇಂದ್ರ ಸರಕಾರವು ರೈತರ, ಜನಹಿತವನ್ನು ಕಾಪಾಡುತ್ತಿದೆ. ಸಿದ್ದರಾಮಯ್ಯರವರ ನೇತೃತ್ವದ ಸರಕಾರದಲ್ಲಿ ನೀರಾವರಿಗೂ ಹಣ ಇಲ್ಲ; ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭೂಸಿರಿ ಸೇರಿ ಅನೇಕ ಯೋಜನೆಗಳು ರದ್ದಾಗಿವೆ. ರೈತರ ಬೆನ್ನುಮೂಳೆ ಮುರಿಯಲು ಸಿದ್ದರಾಮಯ್ಯರ ಸರಕಾರ ಮುಂದಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಅವರು ಟೀಕಿಸಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬಿಜೆಪಿ ಬೆಂಗಳೂರು ಮಹಾನಗರ ರೈತ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಜನವಿರೋಧಿ ಸರಕಾರ.
ಮತಬ್ಯಾಂಕಿನ ರಾಜಕಾರಣಕ್ಕಾಗಿ ಸರಕಾರದ ಬೊಕ್ಕಸವನ್ನು ಲೂಟಿ ಮಾಡಿ ರೈತರ ಸರ್ವನಾಶ ಮಾಡಲು ಈ ಕಾಂಗ್ರೆಸ್ ಸರಕಾರ ಹೊರಟಿದೆ ಎಂದು ಆಕ್ಷೇಪಿಸಿದರು.
ಈ ಸರಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಸರಕಾರದ ಆಡಳಿತದ ಕೇವಲ 80 ದಿನಗಳಲ್ಲಿ ರಾಜ್ಯದ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷಪೂರಿತ ನೀರು ಸೇವಿಸಿ ಹಲವರು ಮೃತಪಟ್ಟಿದ್ದಾರೆ. ಈ ಸರಕಾರ ಬದುಕಿಲ್ಲ ಎಂದರು.
ದಲಿತರು, ಬಡವರು, ರೈತರು ಸೇರಿದಂತೆ ಜನವಿರೋಧಿ ನೀತಿ ಈ ಸರಕಾರದ್ದು ಎಂದ ಅವರು, ಜನಪರ ಬಿಜೆಪಿ ಯೋಜನೆಗಳನ್ನು ಪುನರ್ ಸ್ಥಾಪಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು. ಕೇಂದ್ರ ಸರಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆ ಜಾರಿಗೊಳಿಸಿದೆ. ನೀವು ಕೂಡ ಬೆಂಬಲ ಬೆಲೆ ಯೋಜನೆ ಜಾರಿ ಮಾಡಿ ಎಂದು ಅವರು ಆಗ್ರಹಿಸಿದರು.
ರಾಗಿ ಖರೀದಿ ಆರಂಭಿಸಿ. ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ಸರಕಾರ ಕೊಡುತ್ತಿದ್ದ 4 ಸಾವಿರವನ್ನು ಮುಂದುವರಿಸಿ. 6 ಸಾವಿರ ಕೊಟ್ಟು ನಿಮ್ಮ ಸಾಮಥ್ರ್ಯ ತೋರಿಸಿ ಎಂದು ಸವಾಲೆಸೆದರು. ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ. ಕಂಟ್ರಾಕ್ಟರ್‍ಗಳು ನಿಮ್ಮ ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಸರಕಾರ ರೈತವಿರೋಧಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ರೈತರಿಗೆ ನೀರು ಕೊಟ್ಟು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಕೊಡಿ ಎಂದು ಅವರು ಸಲಹೆ ನೀಡಿದರು. ರಾಜ್ಯದ ಹಿತ ಬಲಿ ಕೊಡದಿರಿ ಎಂದು ಅವರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯದ ಮಾಜಿ ಸಚಿವÀ ಡಾ|| ಸಿ.ಎನ್. ಅಶ್ವತ್ಥನಾರಾಯಣ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ, ಬೆಂಗಳೂರು ಉತ್ತರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತೀಶ್ ಕಡತನಮಲೆ, ಬೆಂಗಳೂರು ಕೇಂದ್ರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರುದ್ರಪ್ಪ, ಬೆಂಗಳೂರು ದಕ್ಷಿಣ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಮುತ್ತಸಂದ್ರ, ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು.