
ಕಲಬುರಗಿ/ಆಳಂದ: ಆಳಂದ ಮತಗಳ್ಳತನ ಪ್ರಕರಣದ ತನಿಖೆಯ ಭಾಗವಾಗಿ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೆದಾರ್ ಅವರ ಮನೆ ಮೇಲೆ ವಿಶೇಷ ತನಿಖಾ ತಂಡ (ಎಸ್ಐಟಿ) ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ, ಅವರ ಮನೆಯಿಂದ ಅಲ್ಪದೂರದಲ್ಲಿರುವ ಬಡಾವಣೆಯಲ್ಲಿ ರಾಶಿ ರಾಶಿ ದಾಖಲೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.
ರೇವಣ ಸಿದ್ದೇಶ್ವರ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ದಾಖಲೆ ಸುಟ್ಟಿರುವ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶದ ಶಂಕೆ ವ್ಯಕ್ತವಾಗಿದೆ. ಸುಟ್ಟ ದಾಖಲೆಗಳು ಗುತ್ತೆದಾರ್ ಮನೆ ದಾಳಿಗೆ ಸಂಬಂಧಿತವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಳಂದ ಪೊಲೀಸ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಫಾರೆನ್ಸಿಕ್ ತಂಡವೂ ಸ್ಥಳದಿಂದ ಮಾದರಿ ಸಂಗ್ರಹಿಸಿದೆ.

ಮೂರು ಕಡೆ ಎಸ್ಐಟಿ ದಾಳಿ
ಬುಧವಾರ ಬೆಳಿಗ್ಗೆ, ಎಸ್ಐಟಿ ಎಸ್ಪಿ ಶುಭಾನ್ವಿತಾ ಅವರ ನೇತೃತ್ವದಲ್ಲಿ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಸುಭಾಷ್ ಗುತ್ತೆದಾರ್ ಅವರ ಮನೆಯಲ್ಲಿ ಹಾಗೂ ಒಬ್ಬ ಚಾರ್ಟೆಡ್ ಅಕೌಂಟೆಂಟ್ ಮನೆಯಲ್ಲಿ ದಾಳಿ ನಡೆಸಲಾಯಿತು. ನೂರಕ್ಕೂ ಹೆಚ್ಚು ಪೊಲೀಸರನ್ನು ಒಳಗೊಂಡ ತಂಡ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಈ ದಾಳಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಆಳಂದ ಕ್ಷೇತ್ರದ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದು, ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಗುತ್ತೆದಾರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

“ಎಲ್ಲವೂ ಸುಳ್ಳು ಆರೋಪ” – ಗುತ್ತೆದಾರ್ ಪ್ರತಿಕ್ರಿಯೆ
ದಾಳಿಗೂ ಮುನ್ನ ಪ್ರತಿಕ್ರಿಯೆ ನೀಡಿದ ಸುಭಾಷ್ ಗುತ್ತೆದಾರ್ ಅವರು, “ಆಳಂದದಲ್ಲಿ ಯಾವುದೇ ಮತಗಳ್ಳತನ ನಡೆದಿಲ್ಲ. ಎಲ್ಲವೂ ಸುಳ್ಳು ಆರೋಪ. ಬಿ.ಆರ್. ಪಾಟೀಲ್ ಅವರು ರಾಹುಲ್ ಗಾಂಧಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅದನ್ನಾಧರಿಸಿ ರಾಹುಲ್ ಗಾಂಧಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ನ ರಾಜಕೀಯ ಸಂಚು,” ಎಂದು ಹೇಳಿದ್ದಾರೆ.
ಕಾಂಗ್ರೆಸ್-ಬಿಜೆಪಿ ನಡುವೆ ಹೊಸ ರಾಜಕೀಯ ಸಂಘರ್ಷ
ಈ ಪ್ರಕರಣಕ್ಕೆ ರಾಷ್ಟ್ರ ಮಟ್ಟದಲ್ಲಿ ಮತ್ತಷ್ಟು ತೀವ್ರತೆ ಸಿಕ್ಕಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವಾರು ರಾಜ್ಯಗಳಲ್ಲಿ ಮತದಾರರ ಮಾಹಿತಿಯ ಕಳವು ನಡೆದಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆಯ ನಂತರ ಕರ್ನಾಟಕ ಸರ್ಕಾರವು ಹೈಲೆವೆಲ್ ಎಸ್ಐಟಿ ತನಿಖೆಗೆ ಆದೇಶ ನೀಡಿತ್ತು.
ಎಸ್ಐಟಿ ದಾಳಿ ಮತ್ತು ಅದರ ಕೆಲವೇ ಗಂಟೆಗಳ ಬಳಿಕ ದಾಖಲೆ ಸುಡುವ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ ಸಾಕ್ಷ್ಯ ನಾಶದ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.