ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಕೇಂದ್ರ ನಗರ ಪಾಲಿಕೆ ಆಯುಕ್ತರು ಶುಕ್ರವಾರ ಬೆಳಿಗ್ಗೆ ಮಸ್ಟರಿಂಗ್ ಕೇಂದ್ರಗಳು, ತ್ಯಾಜ್ಯ ಬ್ಲಾಕ್‌ಸ್ಪಾಟ್‌ಗಳು ಮತ್ತು ಪ್ರಮುಖ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಕೆಲ ಆಯುಕ್ತರು ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರ ಪರಿಶೀಲನೆ

ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮುಲ ಸುನೀಲ್ ಕುಮಾರ್ ಬೆಳಿಗ್ಗೆ 6 ಗಂಟೆಗೆ ಯಲಹಂಕ ಸ್ಯಾಟಲೈಟ್ ವಾರ್ಡ್ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರ ಮತ್ತು ತಿಂಡ್ಲು ವಾರ್ಡ್ ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿದರು. ಹಾಜರಾತಿ ಪರಿಶೀಲಿಸಿ, ಪೌರಕಾರ್ಮಿಕರು ರಸ್ತೆ ಬದಿ ಮಾತ್ರವಲ್ಲದೆ ಶೋಲ್ಡರ್ ಡ್ರೈನ್ ಮತ್ತು ಪಾದಚಾರಿ ಮಾರ್ಗಗಳ ಸ್ವಚ್ಛತೆಯನ್ನೂ ಕಾಪಾಡಬೇಕು ಎಂದು ಸೂಚಿಸಿದರು. ಅಂಗಡಿಗಳ ಮುಂಭಾಗ ಕಸ ಬಿಸಾಡದಂತೆ ಎಚ್ಚರಿಕೆ ನೀಡಲು ಹಾಗೂ ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲು ಆದೇಶಿಸಿದರು. ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಮತ್ತು ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರ ಪರಿಶೀಲನೆ

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಜಯನಗರ ವಾರ್ಡ್ ವ್ಯಾಪ್ತಿಯ ಮಸ್ಟರಿಂಗ್ ಕೇಂದ್ರ ಹಾಗೂ ತ್ಯಾಜ್ಯ ಬ್ಲಾಕ್‌ಸ್ಪಾಟ್‌ಗಳನ್ನು ಪರಿಶೀಲಿಸಿದರು. ಸಾಮೂಹಿಕ ಸ್ವಚ್ಛತಾ ಕಾರ್ಯ, ಪಾದಚಾರಿ ಮಾರ್ಗದ ದುರಸ್ತಿ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಸ್ವಚ್ಛತೆಗೆ ಒತ್ತು ನೀಡಿದರು. ಅಲ್ಲದೇ ಸ್ಥಳೀಯ ನಿವಾಸಿಗಳೊಂದಿಗೆ ಸಮಸ್ಯೆ ಚರ್ಚಿಸಿ ತ್ವರಿತ ಪರಿಹಾರ ಭರವಸೆ ನೀಡಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರ ಪರಿಶೀಲನೆ


ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಬೆಳಿಗ್ಗೆ ಹಾವನೂರು ವೃತ್ತ, ಬಸವೇಶ್ವರನಗರ, ಸಿದ್ಧಯ್ಯ ಪುರಾಣಿಕ ರಸ್ತೆ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ಮಸ್ಟರಿಂಗ್ ಕೇಂದ್ರಗಳ ಸ್ವಚ್ಛತೆ, ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್, ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟ ಸುಧಾರಣೆ ಕುರಿತು ಸೂಚಿಸಿದರು. ಜೊತೆಗೆ ರಸ್ತೆ ಬದಿ ನೇತಾಡುವ OFC ಕೇಬಲ್ ತೆರವು, ಪರವಾನಗಿ ಪರಿಶೀಲನೆ, ರಾಜಕಾಲುವೆ–ಚರಂಡಿ ಹೂಳೆತ್ತುವಿಕೆ ನಡೆಸುವಂತೆ ನಿರ್ದೇಶಿಸಿದರು. ಜಂಟಿ ಆಯುಕ್ತ ಸಂಗಪ್ಪ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರ ಪರಿಶೀಲನೆ

ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಇಬ್ಬಲೂರು ಜಂಕ್ಷನ್, ವಿಪ್ರೋ, ಸನ್ನಿ ಬ್ರೂಕ್ಸ್, ದೊಡ್ಡಕನ್ನಹಳ್ಳಿ ರಸ್ತೆ, ಪಣತ್ತೂರು, ಬಳಗೆರೆ, ವರ್ತೂರು ಕೋಡಿ ಬ್ರಿಡ್ಜ್, ಸಾಯಿ ಲೇಔಟ್ ಸೇರಿ ಹಲವು ಸ್ಥಳಗಳಿಗೆ ಭೇಟಿ ನೀಡಿದರು. ರಾಜಕಾಲುವೆ ಸಮಸ್ಯೆ ಪರಿಹಾರ, ರಸ್ತೆ ಅಗಲೀಕರಣ, ಡ್ರೈನೇಜ್ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ಆರ್‌ಸಿಸಿ ಗೋಡೆ ನಿರ್ಮಾಣ ಮುಂತಾದ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚಿಸಿದರು. ಅಪರ ಆಯುಕ್ತ (ಅಭಿವೃದ್ಧಿ) ಲಕ್ಕಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತ ದಾಕ್ಷಾಯಿಣಿ ಹಾಗೂ ಇಂಜಿನಿಯರ್‌ಗಳು ಹಾಜರಿದ್ದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರ ಸಭೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಕಚೇರಿಯಲ್ಲಿ ಸಭೆ ನಡೆಸಿ ಕಂದಾಯ, ಕಾಮಗಾರಿ, ಹಣಕಾಸು, ಆರೋಗ್ಯ, ವಿದ್ಯುತ್ ವಿಭಾಗಗಳ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತೆರಿಗೆ ಸಂಗ್ರಹಣೆ, ಬ್ಲಾಕ್‌ಸ್ಪಾಟ್ ನಿರ್ಮೂಲನೆ, ರಸ್ತೆ ಗುಂಡಿ ದುರಸ್ತಿ, ವಿದ್ಯುತ್ ದೀಪ ನಿರ್ವಹಣೆ, ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದರು. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರತಿದಿನ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು ಎಂದರು. ಜಂಟಿ ಆಯುಕ್ತ ರಂಗನಾಥ್, ಉಪ ಆಯುಕ್ತ ರಾಜು, ಮುಖ್ಯ ಇಂಜಿನಿಯರ್‌ಗಳು ಸುಗುಣ ಮತ್ತು ವಿಜಯಕುಮಾರ್ ಹರಿದಾಸ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.