ಕಾರವಾರ: ನದಿಯಲ್ಲಿ ಮುಳುಗಿ ಹುಬ್ಬಳ್ಳಿ ಮೂಲದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ರವಿವಾರ ದಾಂಡೇಲಿ ನಗರದ ಸಮೀಪದಲ್ಲಿರುವ ಜೋಯಿಡಾ ತಾಲೂಕು ವ್ಯಾಪ್ತಿಯ ಬಿರಿಯಂಪಾಲಿ ಗ್ರಾಮದ ಅಕೋಡಾದಲ್ಲಿ ಸಂಭವಿಸಿದೆ.
ಹುಬ್ಬಳ್ಳಿಯ ಈಶ್ವರ ನಗರದ ನಝೀರ್ ಅಹ್ಮದ್ ಚಮನ್ ಸಾಬ್ ಹೊನ್ನಂಬಲ್ (40) ಹಾಗೂ ಅವರ ಮಕ್ಕಳಾದ ಅಲ್ಫೀಯಾ (10) ಮತ್ತು ಮೊಹಿನ್ (6), ನಝೀರ್ ಅವರ ಸಹೋದರಿ ರೇಷ್ಮಾ ಉನ್ನಿಸಾ ತೌಫೀಕ್ ಅಹ್ಮದ್ (38) ಮತ್ತು ಅವರ ಮಕ್ಕಳಾದ ಇಫ್ರಾ (15) ಮತ್ತು ಅಬಿದ್ (12) ಎಂದು ಮೃತಪಟ್ಟವರು ಎಂದು ತಿಳಿದು ಬಂದಿದೆ.
ನದಿಯಲ್ಲಿ ಈಜಾಡುತ್ತಿದ್ದ ವೇಳೆ ಆರು ಜನರ ಪೈಕಿ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಉಳಿದ ಐವರು ಆಕೆಯನ್ನು ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ನಗರದ ಜಂಗಲ್ ಲಾಡ್ಜಸ್ ಹಾಗೂ ಸ್ಥಳೀಯರ ಸಹಕಾರದಲ್ಲಿ ಆರು ಜನರ ಮೃತದೇಹವನ್ನು ಮೇಲಕ್ಕೆ ಎತ್ತಲಾಗಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.