ಬೆಳಗಾವಿ: ‘ಮಿಸ್ಟರ್ ಕ್ಲೀನ್’ ಎಂಬ ಇಮೇಜ್ ಕಟ್ಟಿಕೊಂಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಗಂಭೀರ ಭ್ರಷ್ಟಾಚಾರ ಆರೋಪಗಳಲ್ಲಿ ಸಿಲುಕಿದ್ದು, ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ಕೋಲಾರ ಜಿಲ್ಲೆಯ ನರಸಾಪುರ ಹೋಬಳಿ ಗರುಡನಪಾಳ್ಯ ಗ್ರಾಮದ ಸರ್ವೇ ನಂಬರ್ 47 ಹಾಗೂ 46ಕ್ಕೆ ಸಂಬಂಧಿಸಿದ ಜಮೀನು ವ್ಯವಹಾರಗಳ ಕುರಿತು ಸರ್ಕಾರ ತಕ್ಷಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸರ್ವೇ ನಂಬರ್ 47ರಲ್ಲಿ ಒಂದು ಎಕರೆ ಜಾಗ ಸ್ಮಶಾನ ಭೂಮಿಯಾಗಿದ್ದು, ಯಾವುದೇ ಸಂದರ್ಭದಲ್ಲೂ ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ಈ ಜಮೀನನ್ನು ಪಂಚಾಯತ್ ಪಾರೀಖ ಮೂಲಕ ಕೃಷ್ಣಬೈರೇಗೌಡ ಹಾಗೂ ಅವರ ತಂದೆ ಬಿನ್ ಲೇಟ್ ಸಿ.ಬೈರೇಗೌಡ (ಮಾಜಿ ಸಚಿವ) ಅವರ ಹೆಸರಿಗೆ ಮಾಡಲಾಗಿದೆ ಎಂದು ದಾಖಲೆಗಳೊಂದಿಗೆ ಆರೋಪಿಸಿದರು.
ಇದೇ ಗ್ರಾಮದ ಸರ್ವೇ ನಂಬರ್ 46ರಲ್ಲಿ ಒಟ್ಟು 20 ಎಕರೆ 16 ಗುಂಟೆ ಜಾಗ ಮೂಲ ದಾಖಲೆಗಳ ಪ್ರಕಾರ ಕೆರೆ ಅಂಗಳವಾಗಿದ್ದು, ನಂತರ ದಾಖಲೆಗಳಲ್ಲಿ ‘ಖರಾಬು’ ಎಂದು ಬದಲಾವಣೆ ಮಾಡಲಾಗಿದೆ. ಈ ಎರಡು ಜಮೀನುಗಳನ್ನು ಸೇರಿಸಿದರೆ ಒಟ್ಟು 21 ಎಕರೆ 16 ಗುಂಟೆಯಾಗುತ್ತದೆ. ಪ್ರತಿ ಎಕರೆಗೆ ₹5ರಿಂದ ₹6 ಕೋಟಿ ಮೌಲ್ಯ ಇರುವುದರಿಂದ, ಈ ಭೂಮಿಯ ಒಟ್ಟು ಮೌಲ್ಯ ₹100 ಕೋಟಿಗೂ ಅಧಿಕವಾಗುತ್ತದೆ ಎಂದು ಅವರು ಹೇಳಿದರು.
“ಮೂಲ ದಾಖಲೆಗಳಲ್ಲಿ ಸ್ಪಷ್ಟವಾಗಿ ‘ಸರ್ಕಾರಿ ಖರಾಬು – ಸ್ಮಶಾನ’ ಮತ್ತು ‘ಕೆರೆ’ ಎಂದು ಉಲ್ಲೇಖವಿದೆ. ಇಂತಹ ಭೂಮಿಗಳು ಖಾಸಗಿ ಹೆಸರಿಗೆ ಹೇಗೆ ವರ್ಗಾವಣೆಯಾದವು? ದಾಖಲೆ ತಿದ್ದುಪಡಿ ಮೂಲಕ ಈ ಅನ್ಯಾಯ ನಡೆದಿದೆ” ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.
6-11-1978ರ ದಾಖಲೆಗಳಲ್ಲಿ ಕೆರೆ ಎಂದು ಉಲ್ಲೇಖವಿದ್ದು, ‘ಖರಾಬು’ ಎಂಬ ಪದ ಇತ್ತೀಚಿನ ದಾಖಲೆಗಳಲ್ಲಿ ಸೇರಿಸಲಾಗಿದೆ. ಸ್ಮಶಾನ ಭೂಮಿಯ ದಾಖಲೆ 20-04-2024ರಂದು ಬದಲಾವಣೆ ಮಾಡಲಾಗಿದೆ ಎಂಬುದನ್ನು ಅವರು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು.
ಈ ಎರಡು ಜಮೀನುಗಳನ್ನು ಸರ್ಕಾರ ತಕ್ಷಣ ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಸಿದರು. “ಇದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಭೂ ಹಗರಣಗಳು ಬೆಳಕಿಗೆ ಬರಲಿವೆ” ಎಂದು ಹೇಳಿದರು.
ಈ ವೇಳೆ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.
