ಬೆಂಗಳೂರು:
ಕೋವಿಡ್ ಸಾಂಕ್ರಾಮಿಕವು ತೀವ್ರವಾಗಿದ್ದ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಸಂಸಾರ ಮತ್ತು ಕಷ್ಟಗಳನ್ನು ಮರೆತು ಸಮಾಜದ ಒಳಿತನ್ನು ಗಮನದಲ್ಲಿ ಇಟ್ಟುಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿಯನ್ನು ಗೌರವಿಸುವುದು ಎಲ್ಲರ ಹೊಣೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿರುವ ರೋಟರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಕೋವಿಡ್ ಸಾಂಕ್ರಾಮಿಕಕ್ಕೆ ತುತ್ತಾಗಿ ಮೃತರಾದ ಆರೋಗ್ಯ ಕಾರ್ಯಕರ್ತರ ವಾರಸುದಾರರಿಗೆ ಪರಿಹಾರ ಚೆಕ್ ವಿತರಿಸಿ ಅವರು ಮಾತನಾಡಿದರು.
ಕೋವಿಡ್ ವ್ಯಾಪಕವಾಗಿ ಹಬ್ಬಲು ಆರಂಭಿಸಿದ ವಿಷಮ ಸಂದರ್ಭವು ನಮ್ಮ ಆರೋಗ್ಯ ವ್ಯವಸ್ಥೆಯ ಇತಿಮಿತಿಗಳನ್ನು ತೋರಿಸಿತು. ಎಚ್ಚೆತ್ತುಕೊಂಡ ಸರಕಾರವು ಸಮರೋಪಾದಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಿತು. ಆ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಸಮರ್ಪಣಾ ಭಾವದಿಂದ ಕರ್ತವ್ಯದಲ್ಲಿ ತೊಡಗಿಸಿಕೊಂಡರು ಎಂದು ಅವರು ಕೊಂಡಾಡಿದರು.
ಯಾವುದೇ ವೈರಾಣು ಹಬ್ಬತೊಡಗಿದಾಗ ಗಂಟಲಿನಲ್ಲಿ ಕಫ ಕಟ್ಟುವುದು ಅಪಾಯದ ಮುನ್ಸೂಚನೆಯಾಗಿದೆ. ಸಾರ್ವಜನಿಕರು ಇಂಥ ಸಂದರ್ಭದಲ್ಲಿ ಉದಾಸೀನ ಮಾಡದೆ ತಕ್ಷಣವೇ ರಕ್ತ ಮತ್ತು ಕಫ ಹಾಗೂ ಗಂಟಲ ದ್ರವ ಮುಂತಾದವನ್ನು ಪರೀಕ್ಷೆ ಮಾಡಿಸಿಕೊಂಡು, ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಅವರ ಸಲಹೆ ನೀಡಿದರು.
ನಮ್ಮ ಮಲ್ಲೇಶ್ವರದಲ್ಲಿ #COVID19 ಗೆ ತುತ್ತಾಗಿ ಮೃತರಾದವರ ಕುಟುಂಬಕ್ಕೆ ಸಾಂತ್ವನ ಹೇಳುವ ಜತೆ ಪರಿಹಾರ ಚೆಕ್ ವಿತರಿಸಿ ಅವರ ಜತೆ ಇರುವ ವಿಶ್ವಾಸ ನೀಡಲಾಯಿತು.
— Dr. Ashwathnarayan C. N. (@drashwathcn) December 18, 2021
ಜನತೆಯ ಸುರಕ್ಷತೆಗಾಗಿ ನಮ್ಮ ಸರ್ಕಾರದ ಶ್ರಮ ನಿರಂತರವಾಗಿದ್ದು ಆರೋಗ್ಯ ಸೌಲಭ್ಯಗಳನ್ನು ಕೈಗೆಟಕುವ ರೀತಿಯಲ್ಲಿ ಒದಗಿಸಲಾಗುತ್ತಿದೆ. ಕೋವಿಡ್ ನಿಯಮಗಳನ್ನು ಪಾಲಿಸೋಣ. pic.twitter.com/LZaWUVLsd1
ಇಂದು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲೇ ಇಂತಹ ಎಲ್ಲ ಬಗೆಯ ಪರೀಕ್ಷೆಗಳನ್ನೂ ನಡೆಸುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಜನರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.