ಬೆಳಗಾವಿ:
ಇನ್ನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯೋಧನೊಬ್ಬ ರೈಲಿನಿಂದ ಕಾಲು ಜಾರಿ ಬಿದ್ದು, ಮಸಣದ ಹಾದಿ ತುಳಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಾಶಿನಾಥ ಶಿಂಧಿಗಾರ (28) ಮೃತ ಯೋಧ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದ ವೀರ ಯೋಧರಾಗಿದ್ದು, ಕಳೆದ 8 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮದುವೆಗೆಂದು ಪಂಜಾಬ್‌ನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವವೇಳೆ ರೈಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ರೈಲು ಚಲಿಸುವ ವೇಳೆ ಯೋಧ ರೈಲಿನ ಬಾಗಿಲಿನ ಬಳಿ ಕುಳಿತುಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ರೈಲಿನಿಂದ ಕಾಲು ಜಾರಿ ಬಿದ್ದು, ಗಂಭೀರವಾಗಿ ಗಾಯಗೊಂಡ ಯೋಧನನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್.8ರಂದು ಸಾವನ್ನಪ್ಪಿದ್ದಾರೆ.
ಯೋಧನ ಸಾವಿನಿಂದ ಸ್ವಗ್ರಾಮ ಕನಸಗೇರಿಯಲ್ಲಿ ಸ್ಮಶಾನ ಮೌನ ಆವರಿಸಿದ್ದು, ದುಃಖ ಮಡುಗಟ್ಟಿದೆ. ಮೃತ ಯೋಧನ ಪಾರ್ಥಿವ ಶರೀರ ಶನಿವಾರ ಸ್ವಗ್ರಾಮ ಕನಸಗೇರಿಗೆ ತಲುಪಿದ್ದು, ಅಂತ್ಯಕ್ರಿಯೆಯಲ್ಲಿ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡಿದ್ದರು.