ಬೆಂಗಳೂರು:
ಮದ್ಯ ಸೇವನೆಗೆ ಹಣ ನೀಡದ ತಂದೆಯನ್ನು ಪುತ್ರನೊಬ್ಬ ಹತ್ಯೆ ಮಾಡಿರುವ ಘಟನೆಯೊಂದು ಮಾರೇನಹಳ್ಳಿಯ ಪಿಎಫ್ ಲೇಔಟ್‌ನಲ್ಲಿ ನಡೆದಿದೆ.
ಬಸವರಾಜು (60) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಹತ್ಯೆ ಮಾಡಿದ ಪುತ್ರನನ್ನು ಬಿ.ನೀಲಾಧರ್ ಅಲಿಯಾಸ್ ನೀಲಕಂಠ ಎಂದು ಗುರ್ತಿಸಲಾಗಿದೆ. ಹತ್ಯೆ ಬಳಿಕ ಆರೋಪಿ ಮನೆ ಬಾಗಿಲು ಹಾಕಿ ಪರಾರಿಯಾಗಿದ್ದಾನೆ. ಎರಡು ದಿನಗಳ ಬಳಿಕ ದೇಹ ಕೊಳೆಯಲಾರಂಭಿಸಿದ್ದು, ಬಳಿಕ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಬಸವರಾಜು ಅವರು, ಮಾರೇನಹಳ್ಳಿ ಪಿಎಫ್ ಲೇಔಟ್ ನಲ್ಲಿ ಖಾಸಗಿ ಶಾಲೆಗೆ ಸೇರಿದ ಶೆಡ್ ನಲ್ಲಿ ತಮ್ಮ ಪತ್ನಿ ಇಂದ್ರಮ್ಮ ಜೊತೆಗೆ ನೆಲೆಸಿದ್ದರು. ಆ ಶಾಲೆಯಲ್ಲಿ ಅವರ ಪತ್ನಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಸವರಾಜು ಪೇಂಟರ್ ಆಗಿದ್ದರು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅವರ ಪುತ್ರ ನೀಲಾಧರ್, ನಾಗರಬಾವಿಯಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದ. ಆಗಾಗ್ಗೆ ಪೋಷಕರ ಮನೆಗೆ ಬಂದು ಹಣಕ್ಕಾಗಿ ಗಲಾಟೆ ಮಾಡಿ ಹೋಗುತ್ತಿದ್ದ. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಇಂದಮ್ಮ ಕಲಬುರಿಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಬಸವರಾಜು ಏಕಾಂಗಿಯಾಗಿ ನೆಲೆಸಿದ್ದರು.
ಏಪ್ರಿಲ್ 10 ರಂದು ತಂದೆ ಮನೆಗೆ ಬಂದ ನೀಲಾಧರ್ ಮದ್ಯಸೇವನೆಗೆ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಬಸವರಾಜು ಅವರು ಮಗನನ್ನು ಬೈದು ಹೊರಗೆ ಕಳುಹಿಸಲು ಮುಂದಾಗಿದ್ದಾರೆ. ಈ ವೇಳೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಆರೋಪಿ, ಖಾರ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ತಂದೆ ಹತ್ಯೆಗೆ ಕಾರಣ ತಿಳಿಯದ ಪುತ್ರಿ ಅಂಬಿಕಾ ಪೊಲೀಸರಿಗೆ ದೂರು ನೀಡಿದ್ದರು. ಈ ನಡುವೆ ಆರೋಪಿ ತನ್ನ ಹುಟ್ಟೂರು ಕಲಬುರಗಿಗೆ ಹೋಗಿದ್ದು, ಮದ್ಯ ಸೇವಿಸಿ ಇತರರೊಂದಿಗೆ ತನ್ನ ತಂದೆಯನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಇದನ್ನು ಕೇಳಿಸಿಕೊಂಡ ತಾಯಿ ಇಂದ್ರಮ್ಮ, ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ನೀಲಾಧರ್ ನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.