ಬೆಂಗಳೂರು, ಜನವರಿ 05: ಲಿಂಗರಾಜಪುರಂ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದ ಕಲುಷಿತ ನೀರಿನ ಸಮಸ್ಯೆಯ ಮೂಲವನ್ನು ಬೆಂಗಳೂರು ಜಲಮಂಡಳಿ (BWSSB) ಯಶಸ್ವಿಯಾಗಿ ಪತ್ತೆಹಚ್ಚಿದೆ.
ಜಲಮಂಡಳಿ ಅಳವಡಿಸಿಕೊಂಡಿರುವ ಆಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸಿ ಇಂದು ಬೆಳಿಗ್ಗೆ ಸುಮಾರು 10:30ರ ವೇಳೆಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದ್ದ ನಿಖರ ಸ್ಥಳವನ್ನು ತಾಂತ್ರಿಕ ತಂಡ ಗುರುತಿಸಿದೆ.
ರೋಬೋಟಿಕ್ ತಪಾಸಣೆಯ ವೇಳೆ, ಸುಮಾರು 40 ವರ್ಷ ಹಳೆಯದಾದ ನೀರು ಪೈಪ್ಲೈನ್ನಲ್ಲಿ ತೀವ್ರ ತುಕ್ಕು (corrosion) ಕಂಡುಬಂದಿದ್ದು, ಇದರಿಂದ ನೀರು ಕಲುಷಿತವಾಗುತ್ತಿದ್ದುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಸಮಸ್ಯೆ ಪತ್ತೆಯಾದ ತಕ್ಷಣವೇ ಜಲಮಂಡಳಿ ಎಚ್ಚೆತ್ತುಕೊಂಡಿದ್ದು, ಹಳೆಯ ಪೈಪ್ಲೈನ್ ಅನ್ನು ಸಂಪೂರ್ಣವಾಗಿ ಬದಲಾಯಿಸಲು ತೀರ್ಮಾನಿಸಿದೆ. ಪೈಪ್ ಬದಲಾವಣೆ ಕಾರ್ಯ ಮುಗಿದ ಬಳಿಕ ಲಿಂಗರಾಜಪುರಂ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರಿನ ಸರಬರಾಜು ಪುನರಾರಂಭವಾಗಲಿದೆ ಎಂದು ತಿಳಿಸಲಾಗಿದೆ.
ಈ ಸಂಬಂಧ ಮಾತನಾಡಿದ ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್,
“ನಮ್ಮ ಇಂಜಿನಿಯರಿಂಗ್ ತಂಡವು ರೋಬೋಟಿಕ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಲ್ಪ ಸಮಯದಲ್ಲಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಿರುವುದು ಶ್ಲಾಘನೀಯ. ಈ ತ್ವರಿತ ಮತ್ತು ತಂತ್ರಜ್ಞಾನಾಧಾರಿತ ಕಾರ್ಯಾಚರಣೆಗಾಗಿ ಇಂಜಿನಿಯರಿಂಗ್ ತಂಡವನ್ನು ಅಭಿನಂದಿಸುತ್ತೇನೆ,” ಎಂದು ಹೇಳಿದರು.
ಹಳೆಯ ಪೈಪ್ಲೈನ್ಗಳಿರುವ ನಗರ ಪ್ರದೇಶಗಳಲ್ಲಿ ಇಂತಹ ರೋಬೋಟಿಕ್ ತಪಾಸಣೆ ಭವಿಷ್ಯದಲ್ಲಿ ನೀರು ಸರಬರಾಜು ಸಮಸ್ಯೆಗಳನ್ನು ವೇಗವಾಗಿ ಪತ್ತೆಹಚ್ಚಲು ಸಹಕಾರಿಯಾಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
