ಟರೋಬಾ: ಸರ್ವಾಂಗೀಣ ಪ್ರದರ್ಶನದ ಮೂಲಕ ಅಫ್ಘಾನಿಸ್ತಾನವನ್ನು 9 ವಿಕೆಟ್‍ಗಳ ಅಂತರದಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಹರಿಣಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಕ್ರಿಕೆಟ್ ಶಿಶುಗಳು ಕೇವಲ 11.5 ಓವರ್‍ಗಳಲ್ಲಿ 56 ರನ್‍ಗಳಿಗೆ ಆಲೌಟ್ ಆದರೆ, ಸುಲಭ ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ 8.5 ಓವರ್ ಗಳಲ್ಲಿ ಗೆಲುವಿನ ಗುರಿ ತಲುಪಿತು. ತಂಡದ ಮೊತ್ತ 5 ಆಗುವಷ್ಟರಲ್ಲಿ ಕ್ವಿಂಟನ್ ಡಿಕಾಕ್ (5) ಅವರ ವಿಕೆಟ್ ಕಳೆದುಕೊಂಡ ಆಫ್ರಿಕಾ ಪರ ಬಳಿಕ ರೀಝಾ ಹೆಂಡ್ರಿಕ್ಸ್ (25 ಎಸೆತಗಳಲ್ಲಿ 29) ಮತ್ತು ಏಡನ್ ಮಾಕ್ರಂ (21 ಎಸೆತಗಳಲ್ಲಿ 23) ಉತ್ತಮ ಪ್ರದರ್ಶನ ನೀಡಿ, ಸುಲಭ ಗೆಲುವಿಗೆ ಕಾರಣರಾದರು.
South Africa are through to their first Men's #T20WorldCup Final 🙌 pic.twitter.com/EoBSVbfMZm
— T20 World Cup (@T20WorldCup) June 27, 2024
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಬೌಲರ್ ಗಳ ಸಂಘಟಿತ ದಾಳಿಗೆ ಬೆಚ್ಚಿದ ಕ್ರಿಕೆಟ್ ಶಿಶುಗಳು ಪೆವಿಲಿಯನ್ ಪರೇಡ್ ನಡೆಸಿದರು. ಆಫ್ರಿಕಾ ಪರ ಮಾರ್ಕೊ ಜಾನ್ಸನ್ (16ಕ್ಕೆ 3) ತಬ್ರೇಝ್ ಶಮ್ಸಿ (6ಕ್ಕೆ 3), ರಬಡಾ (14ಕ್ಕೆ 2) ಮತ್ತು ನೋರ್ಜೆ (7ಕ್ಕೆ 2) ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಕಿತ್ತರು.
ಅಫ್ಘಾನ್ ಪರ ಅಜ್ಮತ್ತಲ್ಲಾ ಉಮರ್ಜಿ (10) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಮೂವರು ಆಟಗಾರರು ಶೂನ್ಯಕ್ಕೆ ಪೆವಿಲಿಯನ್‍ಗೆ ವಾಪಸ್ಸಾದರೆ ಮೂವರು ತಲಾ ಎರಡು ರನ್ ಗಳಿಸಿದರು.
ಅಫ್ಘಾನಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಮಾರ್ಕೊ ಜಾನ್ಸನ್ ಮೊದಲ ಓವರ್ ನಲ್ಲೇ ಅಪಾಯಕಾರಿ ಬ್ಯಾಟ್ಸ್ ಮನ್ ರಹಮತ್ತುಲ್ಲಾ ಗರ್ಬೇಝ್ ಅವರ ವಿಕೆಟ್ ಕಿತ್ತರು. ಮೂರನೇ ಓವರ್ ನಲ್ಲಿ ಜಾನ್ಸನ್ ಅವರು ಗುಲ್ಬದದೀನ್ ನಯೀಬ್ (9) ಅವರ ವಿಕೆಟ್ ಕೀಳುವ ಮೂಲಕ ಮತ್ತೊಂದು ಆಘಾತ ನೀಡಿದರು. ನಾಲ್ಕನೇ ಓವರ್ ನಲ್ಲಿ ರಬಡಾ ಎರಡು ಕಿತ್ತರು. 28 ರನ್‍ಗಳಾಗುವಷ್ಟರಲ್ಲೇ ಪ್ರಮುಖ ಆರು ವಿಕೆಟ್ ಗಳನ್ನು ಅಫ್ಘಾನಿಸ್ತಾನ ಕಳೆದುಕೊಂಡಿತು. ಇದು ವಿಶ್ವಕಪ್ ಸೆಮಿಫೈನಲ್ ನ ಕನಿಷ್ಠ ಮೊತ್ತವಾಗಿದೆ.