ನ್ಯೂಯಾರ್ಕ್ : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಡಿ ಗುಂಪಿನ 16ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲ್ಯಾಂಡ್ಸ್ ತಂಡವನ್ನು 4 ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 2ನೆ ಗೆಲುವು ದಾಖಲಿಸಿದೆ.
ಗೆಲ್ಲಲು 104 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 18.5 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 106 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾದ ಪರ ಡೇವಿಡ್ ಮಿಲ್ಲರ್(ಔಟಾಗದೆ 59 ರನ್, 51 ಎಸೆತ,3 ಬೌಂಡರಿ, 4 ಸಿಕ್ಸರ್)ಅಗ್ರ ಸ್ಕೋರರ್ ಎನಿಸಿಕೊಂಡರು. ಟ್ರಿಸ್ಟಾನ್ ಸ್ಟಬ್ಸ್(33 ರನ್, 37 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಒಟ್ನೀಲ್ ಬಾರ್ಟ್ಮನ್ (4-11) ನೇತೃತ್ವದ ಬೌಲರ್ಗಳ ಸಂಘಟಿತ ದಾಳಿಗೆ ತತ್ತರಿಸಿದ ನೆದರ್ಲ್ಯಾಂಡ್ಸ್ ಕ್ರಿಕೆಟ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಮಾರ್ಕ್ರಮ್ ಅವರು ನೆದರ್ಲ್ಯಾಂಡ್ಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಪಂದ್ಯದುದ್ದಕ್ಕೂ ಬ್ಯಾಟಿಂಗ್ನಲ್ಲಿ ಪರದಾಟ ನಡೆಸಿರುವ ಡಚ್ಚರು ಒಂದು ಹಂತದಲ್ಲಿ 100 ರನ್ ದಾಟುವುದು ಕಷ್ಟಕರವಾಗಿತ್ತು. ಕೆಳ ಕ್ರಮಾಂಕದಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಸ್ ಸಾಂದರ್ಭಿಕ ಪ್ರದರ್ಶನ ನೀಡಿ ತಂಡವನ್ನು ಆಧರಿಸಿದರು.
ಇನಿಂಗ್ಸ್ನ ಮೊದಲ ಓವರ್ನ ಮೂರನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಮೈಕಲ್ ಲೆವಿಟ್ ವಿಕೆಟನ್ನು ಕಳೆದುಕೊಂಡ ನೆದರ್ಲ್ಯಾಂಡ್ಸ್ ಕಳಪೆ ಆರಂಭ ಪಡೆದಿತ್ತು. ಇನ್ನೋರ್ವ ಆರಂಭಿಕ ಬ್ಯಾಟರ್ ಮ್ಯಾಕ್ಸ್ ಒ ಡೊವಿಡ್(2 ರನ್)ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ವಿಕ್ರಮ್ಜೀತ್ ಸಿಂಗ್(12 ರನ್) ಹಾಗೂ ಬಾಸ್ ಡಿ ಲೀಡ್(6 ರನ್)ಅಲ್ಪ ಮೊತ್ತಕ್ಕೆ ವಿಕೆಟ್ ಕೈಚೆಲ್ಲಿದಾಗ ನೆದರ್ಲ್ಯಾಂಡ್ಸ್ 32 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡಿತು.
ಸೈಬ್ರಾಂಡ್ ಎಂಗಲ್ಬ್ರೆಕ್ಸ್ (40 ರನ್, 45 ಎಸೆತ, 2 ಬೌಂಡರಿ, 1 ಸಿಕ್ಸರ್)ತಂಡದ ಪರ ಏಕಾಂಗಿ ಹೋರಾಟ ನೀಡಿದರು.
ಲೊಗನ್ ವಾನ್ ಬೀಕ್(23 ರನ್, 22 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರು.
ಬಾರ್ಟ್ಮನ್ ಯಶಸ್ವಿ ಪ್ರದರ್ಶನ ನೀಡಿದರು. ಅನ್ರಿಚ್ ನೋರ್ಟ್ಜೆ(2-19) ಹಾಗೂ ಮಾರ್ಕೊ ಜಾನ್ಸನ್(2-20) ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.
ದಕ್ಷಿಣ ಆಫ್ರಿಕಾ ತಂಡ ನಾಸ್ಸೌ ಕ್ರಿಕೆಟ್ ಮೈದಾನದಲ್ಲಿ ಇತ್ತೀಚೆಗೆ ನಡೆದಿದ್ದ ಕನಿಷ್ಠ ಮೊತ್ತದ ಸ್ಪರ್ಧೆಯಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡವನ್ನು 6 ವಿಕೆಟ್ಗಳ ಅಂತರದಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.