
South Korean company Nifco signs agreement with state government to invest ₹ 288 crore in Karnataka
- ಗೌರಿಬಿದನೂರಿನಲ್ಲಿ ತಯಾರಿಕಾ ಘಟಕ ಸ್ಥಾಪನೆ
- 400 ಜನರಿಗೆ ಉದ್ಯೋಗ ಅವಕಾಶಗಳು. ಶೇ 65ರಷ್ಟು ಉದ್ಯೋಗಗಳು ಮಹಿಳೆಯರಿಗೆ
ಬೆಂಗಳೂರು:
ರಾಜ್ಯದಲ್ಲಿ ವಾಹನ ಪ್ಲಾಸ್ಟಿಕ್ ಬಿಡಿಭಾಗ ತಯಾರಿಕಾ ಘಟಕ ಸ್ಥಾಪಿಸಲು ಕೊರಿಯಾ ಮೂಲದ ನಿಫ್ಕೊ ಕಂಪನಿಯ ಅಂಗಸಂಸ್ಥೆಯಾಗಿರುವ ನಿಫ್ಕೊ ಸೌತ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಜೊತೆ ಕರ್ನಾಟಕ ಸರ್ಕಾರವು ಇಂದು ಒಡಂಬಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು, ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಶ್ರೀ ಹ್ಯುನ್-ಡಾನ್ ಚೋಯ್ ಅವರ ಜೊತೆ ವಿಸ್ತೃತವಾಗಿ ಚರ್ಚಿಸಿದರು. ಕಂಪನಿಗೆ ರಾಜ್ಯ ಸರ್ಕಾರವು ಕೊಡಮಾಡಲಿರುವ ಸೌಲಭ್ಯಗಳು ಮತ್ತು ಉತ್ತೇಜನೆಗಳ ಬಗ್ಗೆ ಸಚಿವರು ಚೋಯ್ ಅವರಿಗೆ ವಿವರಿಸಿದರು. ತದನಂತರ ಸಚಿವರ ಸಮ್ಮುಖದಲ್ಲಿ ‘ಎಂಒಯು’ಗೆ ಸಹಿ ಹಾಕಲಾಯಿತು.
ಈ ಒಪ್ಪಂದದ ಪ್ರಕಾರ ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು, ವಾಹನಗಳ ಪ್ಲಾಸ್ಟಿಕ್ ಬಿಡಿಭಾಗಗಳನ್ನು ತಯಾರಿಸುವ ಹೊಸ ಘಟಕವನ್ನು ಗೌರಿಬಿದನೂರಿನಲ್ಲಿ ಸ್ಥಾಪಿಸಲು ₹ 288 ಕೋಟಿ ಹೂಡಿಕೆ ಮಾಡಲಿದೆ. ಈ ತಯಾರಿಕಾ ಘಟಕದಲ್ಲಿ 400 ಜನರಿಗೆ ಉದ್ಯೋಗ ಅವಕಾಶಗಳು ಲಭ್ಯ ಇರಲಿವೆ. ಇದರಲ್ಲಿ ಶೇ 65ರಷ್ಟು ಉದ್ಯೋಗಗಳು ಮಹಿಳೆಯರಿಗೆ ದೊರೆಯಲಿವೆ. ಈ ಯೋಜನೆಯು ಐದು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.
ರಾಜ್ಯದಲ್ಲಿ ರೂ. 288 ಕೋಟಿ ಹೂಡಿಕೆಗೆ #NIFCO ಒಡಂಬಡಿಕೆ
— M B Patil (@MBPatil) November 29, 2023
ಎಂಜಿನಿಯರಿಂಗ್, ಆಟೊಮೋಟಿವ್ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ದಕ್ಷಿಣ ಕೊರಿಯಾ ಮೂಲದ ಬಹುರಾಷ್ಟ್ರೀಯ ಕಂಪೆನಿ #NIFCO (Nippon Industrial Fastener Corporation-NIFCO) ರಾಜ್ಯದಲ್ಲಿ ರೂ. 288 ಕೋಟಿ ಹೂಡಿಕೆ ಮಾಡಲಿದೆ. ಈ ಸಂಬಂಧ… pic.twitter.com/DnJiKtL5HC
ಸಚಿವರ ಸಮ್ಮುಖದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಎಸ್ ಸೆಲ್ವಕುಮಾರ್ ಮತ್ತು ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಹ್ಯುನ್-ಡಾನ್ ಚೋಯ್ ಅವರು ಒಪ್ಪಂದಕ್ಕೆ ಸಹಿ ಹಾಕಿ, ದಾಖಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಇದ್ದರು.
ರಾಜ್ಯದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ನೀತಿ / ನಿಯಮಗಳು ಮತ್ತು ನಿಬಂಧನೆಗಳ ಅನುಸಾರ ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಅನುಮತಿ / ನೋಂದಣಿ ಪಡೆಯಲು ಕರ್ನಾಟಕ ಸರ್ಕಾರವು ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಕಂಪನಿಗೆ ಅಗತ್ಯ ನೆರವು ಕಲ್ಪಿಸಲಿದೆ.
ಹುಂಡೈ ಮೋಟರ್ ಇಂಡಿಯಾ, ಕಿಯಾ ಮೋಟರ್ಸ್, ನಿಸಾನ್, ಫೋರ್ಡ್ ಮತ್ತು ಟೊಯೊಟಾ ಮುಂತಾದವು ನಿಫ್ಕೊದ ಭಾರತದಲ್ಲಿನ ಪ್ರಮುಖ ಗ್ರಾಹಕ ಕಂಪನಿಗಳಾಗಿವೆ.