
Sovereignty for Karnataka: Election Commission seeks clarity from AICC President Mallikarjun Kharge
ಬೆಂಗಳೂರು:
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ‘ಕರ್ನಾಟಕ ಸಾರ್ವಭೌಮತ್ವ ಹೇಳಿಕೆ ಕುರಿತು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಾಕಲಾಗಿರುವ ಫೋಸ್ಟ್ ಗೆ ಸ್ಪಷ್ಟೀಕರಣ ನೀಡುವಂತೆ ಹಾಗೂ ಅದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಎಐಸಿಸಿ ಅಧ್ಯಕ್ಷರಿಗೆ ಚುನಾವಣಾ ಆಯೋಗ ಸೂಚಿಸಿದೆ.
ರಾಜ್ಯ ಚುನಾವಣಾ ಪ್ರಚಾರದ ವೇಳೆ ಸೋನಿಯಾ ಗಾಂಧಿ ನೀಡಿದ್ದ ಕರ್ನಾಟಕದ ಸಾರ್ವಭೌಮತ್ವದ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳನ್ನು ಸರಿಪಡಿಸುವಂತೆ ಹಾಗೂ ಈ ಬಗ್ಗೆ ಸ್ಪಷ್ಟಪಡಿಸುವಂತೆ ಚುನಾವಣಾ ಆಯೋಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದೆ.
ಈ ಸಂಬಂಧ ಬಿಜೆಪಿಯ ಮುಖಂಡರಾದ ಭೂಪೇಂದರ್ ಯಾದವ್, ಡಾ. ಜಿತೇಂದ್ರ ಸಿಂಗ್, ತರುಣ್ ಚುಗ್, ಅನಿಲ್ ಬಲುನಿ ಮತ್ತು ಓಂ ಪಾಠಕ್ ಅವರು ಇಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಕಾಂಗ್ರೆಸ್ ಮಾಡಿರುವ ಟ್ವೀಟ್ ನೋಂದಣಿ ಸಮಯದಲ್ಲಿ 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 29A (5) ಅಡಿಯಲ್ಲಿ ರಾಜಕೀಯ ಪಕ್ಷಗಳು ಕೈಗೊಳ್ಳುವ ಕಡ್ಡಾಯ ಪ್ರಮಾಣ ವಚನದ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.