ಬೆಂಗಳೂರು, ಮಾರ್ಚ್ 04 (ಕರ್ನಾಟಕ ವಾರ್ತೆ) : ವಿಧಾನ ಪರಿಷತ್ ಸದಸ್ಯರೂ ಹಾಗೂ ಹಿರಿಯ ಪತ್ರಕರ್ತರೂ ಆಗಿದ್ದ ಕಾಜಿ ಅರ್ಷದ್ ಅಲಿ ಅವರು 2025ನೇ ಮಾರ್ಚ್ 3 ಸೋಮವಾರದಂದು ಸಂಜೆ ಹೃದಯಾಘಾತದಿಂದ ನಿಧನರಾದರು. ಶ್ರೀಯುತರು ಬಿ.ಡಿ.ಎ. ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರಸ್ ಅಧ್ಯಕ್ಷರಾಗಿಯೂ ಸಹ ಕೆಲಸ ನಿರ್ವಹಿಸಿ ಬೀದರ್ ಜಿಲ್ಲೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರು ಮಾಸ್ ಅಲ್ಲ ಕ್ಲಾಸ್ ರಾಜಕಾರಣಿಯಾಗಿದ್ದರು. ರಾಜಕರಣದಲ್ಲಿ ಬೆಳೆದರೂ ಅವರು ಪತ್ರಿಕಾ ವೃತ್ತಿಯಲ್ಲಿ ಸದಾ ತೊಡಗಿಸಿಕೊಂಡಿದ್ದರು. ದೇಹದಲ್ಲಿ ಶಕ್ತಿ ಇರುವ ತನಕ ಬರವಣಿಗೆಯನ್ನು ಮುಂದುವರೆಸಿದ್ದರು. ಉರ್ದು ಮತ್ತು ಹಿಂದಿ ಪತ್ರಿಕೆಗಳ ಸಂಪಾದಕರಾಗಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ಅನೇಕ ಲೇಖನಗಳನ್ನು ಸಹ ಬರೆದ್ದರು. ಬಹಳ ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಇವರು ಸಾಮಾಜಿಕ ಕಾಳಜಿ, ಬದ್ದತೆಗೆ ಹೆಸರಾಗಿದ್ದರು. ನಿಷ್ಕಳಂಕ ವ್ಯಕ್ತಿತ್ವವನ್ನು ಹೊಂದಿದ್ದರು. ಪತ್ರಕರ್ತರಿಗೆ ಬೆನ್ನು ತಟ್ಟಿ ಹುರುದುಂಬಿಸುತ್ತಿದ್ದರು. ಅವರ ಅಗಲಿಕೆ ಪತ್ರಿಕಾ ರಂಗಕ್ಕೆ ಹಾಗೂ ರಾಜಕರಣಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಭಗವಂತ ಅವರ ಅತ್ಮಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಅವರ ಅಗಲಿಕೆಯಿಂದಾಗಿರುವ ನಷ್ಟವನ್ನು ತುಂಬುವಂತ ಶಕ್ತಿ ನೀಡಲಿ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ವ್ಯಕ್ತಪಡಿಸಿದರು.
ಸಂತಾಪ ಸೂಚಕವನ್ನು ಬೆಂಬಲಿಸಿ ಮಾತನಾಡಿದ ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಇಲಾಖೆ ಸಚಿವ ಈಶ್ವರ್ ಬಿ. ಖಂಡ್ರೆ, ಕಾಜಿ ಅರ್ಷದ್ ಅಲಿ ಅವರು ಓರ್ವ ಸಜ್ಜನ ರಾಜಕಾರಣಿಯಾಗಿದ್ದರು. ಅಲ್ಲದೇ ಪತ್ರಕರ್ತರೂ ಸಹ ಆಗಿದ್ದರು. ಅವರು ಬೀದರ್ ಜಿಲ್ಲೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸುತ್ತಾ ಸದನದ ಪರವಾಗಿ, ಎಲ್ಲರ ಪರವಾಗಿ ನಾಡಿನ ಜನತೆಯ ಪರವಾಗಿ ಮೃತ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡುತ್ತಾ, ಕಾಜಿ ಅರ್ಷದ್ ಅಲಿ ಅವರು ಎರಡು ಬಾರಿ ವಿಧನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿ ದಿ. ಧರ್ಮಸಿಂಗ್ ಅವರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು. ಉತ್ತರ ಭಾಗದ ಜಿಲ್ಲೆಗಳ ಸಮಸ್ಯೆಗಳು ಬಂದಾಗ ಅವರು ಅದರ ಪರವಾಗಿ ಎದ್ದು ನಿಲ್ಲುತ್ತಿದ್ದರು. ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ತಿಳಿಸುತ್ತಾ, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ನಂತರ ಮೃತರ ಗೌರವಾರ್ಥ ಸದನದಲ್ಲಿ ಎಲ್ಲಾ ಸದಸ್ಯರು ಒಂದು ನಿಮಿಷಗಳ ಮೌನಾಚರಣೆ ಮಾಡಿದರು.