ಬೆಂಗಳೂರು, ಆಗಸ್ಟ್ 21 ( ಕರ್ನಾಟಕ ವಾರ್ತೆ) ಆನ್ ಲೈನ್ ವಂಚನೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ರಾಜ್ಯದಲ್ಲಿ 43 ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳೆಂದು ಮರು ಪದನಾಮೀಕರಿಸಿ ಅದೇಶಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು
ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೈಬರ್ ಕ್ರೈಮ್ ಠಾಣೆಗಳಿಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅಧಿಕಾರ ನೀಡಿ ವ್ಯಾಪ್ತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.ರಾಜ್ಯದಲ್ಲಿ ಡಿಜಿಪಿ ಸೈಬರ್ ಕಮಾಂಡ್ ಹುದ್ದೆ ಸೃಜಿಸಲಾಗಿದೆ. ಸಿಐಡಿ ಯಲ್ಲಿ ಸೈಬರ್ ಕ್ರೈಮ್ ವಿಭಾಗವು ರಾಜ್ಯದ ಸೈಬರ್ ಅಪರಾಧ ತನಿಖೆಗೆ ಕೇಂದ್ರ ಕಚೇರಿಯಾಗಿರುತ್ತದೆ. ಜೊತೆಗೆ ಡಿಜಿಟಲ್ ಫೊರೆನ್ಸಿಕ್ ಪ್ರಯೋಗಾಲಯವನ್ನು ಸಹ ಸ್ಥಾಪನೆ ಮಾಡಲಾಗಿದೆ. ಸೈಬರ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಆಧುನಿಕ ತಂತ್ರಜ್ಞಾನ ಹೊಂದಿರುವ ಉಪಕರಣಗಳನ್ನು ಬಳಸುತ್ತಿದ್ದು, ಆ ಸಂಬಂಧ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ಒದಗಿಸಲಾಗುತ್ತಿದೆ. ಸಿಐಡಿ ಯ ಸೈಬರ್ ಫೊರೆನ್ಸಿಕ್ ಯುನಿಟ್ ವಿಭಾಗವು ರಾಜ್ಯದಲ್ಲಿ ದಾಖಲಾಗುವ ಸೈಬರ್ ಪ್ರಕರಣಗಳಿಗೆ ತಾಂತ್ರಿಕ ನೆರವು ನೀಡುತ್ತಾ ಬಂದಿದೆ ಎಂದು ತಿಳಿಸಿದರು