ನಟಿ ಶ್ರೀಲೀಲಾ (Sreeleela) ಅವರು ಕನ್ನಡದಲ್ಲಿ ಮಿಂಚುವುದರ ಜೊತೆಗೆ ಪರಭಾಷೆಯಲ್ಲೂ ನಟಿಸಿದ್ದಾರೆ. ಕನ್ನಡದ ‘ಕಿಸ್’, ‘ಭರಾಟೆ’, ‘ಬೈಟೂ ಲವ್’ ಸಿನಿಮಾಗಳಲ್ಲಿ ಜನರನ್ನು ರಂಜಿಸಿದ ಈ ಸುಂದರಿಗೆ ತೆಲುಗು ಮಂದಿ ಮಣೆ ಹಾಕುತ್ತಿದ್ದಾರೆ. ಟಾಲಿವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ಗಳನ್ನು ಪಡೆದುಕೊಳ್ಳುತ್ತ ಶ್ರೀಲೀಲಾ ಮುಂದುವರಿಯುತ್ತಿದ್ದಾರೆ. ಅಚ್ಚರಿ ಎಂದರೆ ಅವರೀಗ ಅಲ್ಲು ಅರ್ಜನ್ (Allu Arjun) ಜೊತೆ ನಟಿಸಿದ್ದಾರೆ! ಇಂಥ ಚಾನ್ಸ್ ಸಿಕ್ಕಿದ್ದಕ್ಕೆ ಅವರ ಫ್ಯಾನ್ಸ್ ಖುಷಿ ಆಗಿದ್ದಾರೆ. ಆದರೆ ಶ್ರೀಲೀಲಾ ಅವರು ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಂಡಿರುವುದು ಸಿನಿಮಾಗಾಗಿ ಅಲ್ಲ. ಬದಲಿಗೆ, ಒಂದು ಜಾಹೀರಾತಿನಲ್ಲಿ ಇವರಿಬ್ಬರು ಜೋಡಿ ಆಗಿದ್ದಾರೆ. ತೆಲುಗಿನ ‘ಆಹಾ’ ಒಟಿಟಿಯ (Aha OTT) ಜಾಹೀರಾತಿನ ಸಲುವಾಗಿ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಅವರು ಜೊತೆಯಾಗಿ ಕ್ಯಾಮೆರಾ ಎದುರಿಸಿದ್ದಾರೆ.
ಅಲ್ಲು ಅರ್ಜುನ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಇದೆ. ಅವರ ಜೊತೆ ನಟಿಸಬೇಕು ಎಂಬ ಆಸೆ ಬಹುತೇಕ ಎಲ್ಲ ನಟಿಯರಿಗೂ ಇರುತ್ತದೆ. ಕೆಲವರು ಸಿನಿಮಾದಲ್ಲಿ ತೆರೆ ಹಂಚಿಕೊಂಡರೆ, ಇನ್ನೂ ಕೆಲವರು ಜಾಹೀರಾತಿನಲ್ಲಿ ಒಟ್ಟಿಗೆ ನಟಿಸುತ್ತಾರೆ. ಈಗ ಶ್ರೀಲೀಲಾ ಕೂಡ ‘ಆಹಾ’ ಒಟಿಟಿ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ಗೆ ಜೋಡಿ ಆಗಿದ್ದಾರೆ.
ಇತ್ತೀಚೆಗೆ ಈ ಜಾಹೀರಾತಿನ ಶೂಟಿಂಗ್ ಮುಗಿದಿದೆ. ಇದನ್ನು ದೊಡ್ಡ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಇದಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ರವಿ ಕೆ. ಚಂದ್ರನ್ ಛಾಯಾಗ್ರಹಣ ಮಾಡಿದ್ದಾರೆ. ಶೀಘ್ರದಲ್ಲೇ ಈ ಜಾಹೀರಾತು ಬಿತ್ತರ ಆಗಲಿದೆ.
ಶ್ರೀಲೀಲಾ ಅವರು ತೆಲುಗಿನಲ್ಲಿ ಮೊದಲು ನಟಿಸಿದ ಸಿನಿಮಾ ‘ಪೆಳ್ಳಿ ಸಂದಡಿ’. ಈ ಚಿತ್ರದಲ್ಲಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡರು. ಟಾಲಿವುಡ್ ಪ್ರೇಕ್ಷಕರಿಗೆ ಅವರು ಹೆಚ್ಚು ಇಷ್ಟ ಆಗಿದ್ದಾರೆ. ಪರಿಣಾಮವಾಗಿ ಒಂದಕ್ಕಿಂತ ಮತ್ತೊಂದು ದೊಡ್ಡ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ರವಿ ತೇಜಾ ನಟನೆಯ ‘ಧಮಾಕಾ’ ಸಿನಿಮಾಗೆ ಶ್ರೀಲೀಲಾ ನಾಯಕಿ ಆಗಿದ್ದಾರೆ. ಆ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇನ್ನೂ ಹಲವು ಚಿತ್ರತಂಡಗಳ ಜೊತೆ ಅವರು ಮಾತುಕತೆ ನಡೆಸುತ್ತಿದ್ದಾರೆ. ಟಾಲಿವುಡ್ನಲ್ಲಿ ಅವರ ಚಾರ್ಮ್ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಅವರು ಯಾವೆಲ್ಲ ಪ್ರಾಜೆಕ್ಟ್ ಒಪ್ಪಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ನಿರ್ಮಾಣ ಆಗಿದೆ.
ಇನ್ನು, ಅಲ್ಲು ಅರ್ಜುನ್ ಅವರು ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರದ ಶೂಟಿಂಗ್ನಲ್ಲಿ ಇನ್ನಷ್ಟೇ ಪಾಲ್ಗೊಳ್ಳಬೇಕಿದೆ. ಕಾರಣಾಂತರಗಳಿಂದ ಈ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಲೇ ಇವೆ. ಅದರ ನಡುವೆಯೇ ಅವರು ಶ್ರೀಲೀಲಾ ಜೊತೆ ಜಾಹೀರಾತಿನಲ್ಲಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.