ಬೆಂಗಳೂರು, ಮಾರ್ಚ್ 19, (ಕರ್ನಾಟಕ ವಾರ್ತೆ) : ದೇವಾಲಯಕ್ಕೆ ಸೇರಿದ ಜಮೀನನ್ನು / ಮುಜರಾಯಿ ದೇವಸ್ಥಾನದ ಜಮೀನನ್ನು ಖಾಸಗಿಯವರು ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಎಂದು ಸಾರಿಗೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡ್ಯ ಜಿಲ್ಲೆ, ದೇವಲಾಪುರ ಹೋಬಳಿ, ಕುಡುಗಬಾಳು ಗ್ರಾಮದ ಸರ್ವೆ ನಂ.01 ರಲ್ಲಿನ ಜಮೀನಿನ ಒಟ್ಟು ವಿಸ್ತೀರ್ಣ 13.13-00 ಇದ್ದು, ಇದರಲ್ಲಿ ಅ ಖರಾಬು 3.23-00, ‘ಬ’ ಖರಾಬು 1.34-00 ಉಳಿಕೆ 7.36-00 ವಿಸ್ತೀರ್ಣ ಇರುತ್ತದೆ. ಸದರಿ ಜಮೀನು ಖಾತೆದಾರರಿಗೆ ಸಂಬಂಧಿಸಿದಂತೆ ಲಭ್ಯವಿರುವ ಮ್ಯುಟೇಷನ್ ಪ್ರತಿಯನ್ನು ಒದಗಿಸಿದೆ.
1976 ರಲ್ಲಿ ಶ್ರೀರಾಮೇಶ್ವರ ದೇವಸ್ಥಾನದ ಹೆಸರಿನಲ್ಲಿದ್ದ ಸರ್ವೆ ನಂ.1ರ ಜಮೀನು INA CR 288, 265, 286/81-82ರಂತೆ ನಾರಾಯಣ ದೀಕ್ಷಿತ್, ಗೋಪಾಲ ದೀಕ್ಷಿತ್ ಮತ್ತು ನಂಜಪ್ಪ ದೀಕ್ಷಿತ್ ಅವರುಗಳಿಗೆ 5-27-00, ಹಾಗೂ ಸೀತಾರಾಮ ದೀಕ್ಷಿತ್ ಮತ್ತು ನಾಗಪ್ಪ ದೀಕ್ಷಿತ್ ಅವರುಗಳಿಗೆ 4-14-00 ಮಂಜೂರಾಗಿರುತ್ತದೆ.
ಕುಡುಗಬಾಳು ಶ್ರೀರಾಮಲಿಂಗೇಶ್ವರ ದೇವಾಲಯದ ಕುಡುಗಬಾಳು ಸರ್ವೆ ನಂ. 7 ರಲ್ಲಿ 30 ಗುಂಟೆ, ಸರ್ವೇ ನಂ 5 ರಲ್ಲಿ 11 ಗುಂಟೆ ಮತ್ತು ಸರ್ವೆ ನಂ 64 ರಲ್ಲಿ 7 ಎಕರೆ 39 ಗುಂಟೆ ಇದ್ದು, ದೇವಾಲಯದ ಹೆಸರಿನಲ್ಲಿದೆ. ದೇವಾಲಯದ ಕಟ್ಟ ಕಣ್ಣಳತೆಯಂತೆ ಅಂದಾಜು 60 ಅಡಿ ಉದ್ದ 30 ಅಡಿ ಅಗಲ ಇರುತ್ತದೆ. ಈ ದೇವಾಲಯಕ್ಕೆ ಸೇರಿದ ಜಮೀನನ್ನು / ಮುಜರಾಯಿ ದೇವಸ್ಥಾನದ ಜಮೀನನ್ನು ಖಾಸಗಿಯವರು ಮಾರಾಟ ಮಾಡಲು ಅವಕಾಶ ಇರುವುದಿಲ್ಲ ಹಾಗೂ ಇಂತಹ ಪ್ರಕರಣಗಳು ವರದಿಯಾಗಿರುವುದಿಲ್ಲ. ಆದಾಗಿಯೂ ಪರಭಾರೆಯಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ವರದಿ ನೀಡಲು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆರವರಿಗೆ ನಿರ್ದೇಶನ ನೀಡಲಾಗಿರುತ್ತದೆ.
ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳು ಹೊಂದಿರುವ ಸ್ಥಿರಾಸ್ತಿಯನ್ನು ಸಂಬಂಧಿಸಿದ ದೇವರ ಹೆಸರಿಗೆ ಪಹಣಿ ಮಾಡಲು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ಅಧಿಸೂಚಿತ ದೇವಾಲಯಗಳ ಪಟ್ಟಿಯಲ್ಲಿರುವ ದೇವಾಲಯ/ಸಂಸ್ಥೆಯ ಹೆಸರನ್ನು ಮ್ಯೂಟೇಷನ್ ಮತ್ತು ಆರ್.ಟಿ.ಸಿ.ಯಲ್ಲಿ ನಮೂದಿಸುವಾಗ ‘ದೇವಸ್ಥಾನ ಹೆಸರು” ಮತ್ತು “ಧಾರ್ಮಿಕ ದತ್ತಿ ಇಲಾಖೆ” ಮತ್ತು “ಕರ್ನಾಟಕ ಸರ್ಕಾರ” ಎಂದು ನಮೂದಿಸಲು ಈಗಾಗಲೇ ಸರ್ಕಾರದ ಪತ್ರ ಸಂಖ್ಯೆ:ಕಂಇ 49 ಮುಆಬಿ 2021, ದಿನಾಂಕ:11.11.2021ರ ಸೂಚನೆಯಂತೆ ದೇವಾಲಯದ ಆಸ್ತಿಗಳ ಸರ್ವೆ ಕಾರ್ಯ ಕೈಗೊಂಡು ದೇವಾಲಯಕ್ಕೆ ಸೇರಿದ ಜಮೀನುಗಳ ಮ್ಯೂಟೇಷನ್ ಮತ್ತು ಆರ್.ಟಿ.ಸಿ.ಯಲ್ಲಿ ನಮೂದಿಸುವಾಗ ” ದೇವಸ್ಥಾನ ಹೆಸರು ಮತ್ತು ‘ಧಾರ್ಮಿಕ ದತ್ತಿ ಇಲಾಖೆ” ಮತ್ತು “ಕರ್ನಾಟಕ ಸರ್ಕಾರ” ಎಂದು ನಮೂದಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಒಂದು ಬಾರಿ ದೇವಸ್ಥಾನದ ಭೂಮಿ ಎಂದು ಪರಿಗಣಿಸಿದ ಬಳಿಕ ಅದು ಯಾವುದೇ ಕಾಲದಲ್ಲೂ, ದೇವಸ್ಥಾನದ ಭೂಮಿಯೇ ಆಗಿರುವಂತೆ ಕ್ರಮ ಕೈಗೊಳ್ಳಲಾಗಿರುತ್ತದೆ. ಎಲ್ಲಾ ಅಧಿಸೂಚಿತ ದೇವಾಲಯಗಳ ಜಮೀನುಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997, ಸೆಕ್ಷನ್ 31(7)ರಂತೆ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಲಾಗಿರುತ್ತದೆ ಎಂದು ತಿಳಿಸಿದರು.