ಬೆಂಗಳೂರು:
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಿಗದಿಪಡಿಸಿದ್ದ ಪಠ್ಯಕ್ರಮದ ಪಾಠ ಪ್ರವಚನಗಳು ಮುಗಿದು ಪುನರಾವರ್ತನೆಯ ಹಂತದಲ್ಲಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಪ್ರೇರೇಪಣೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಎಸ್ ಎಸ್ ಎಲ್ ಸಿ ಪಾಠ ಪ್ರವಚನಗಳ ಪ್ರಗತಿ ಮತ್ತು ಪರೀಕ್ಷಾ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗೆ ನೊಂದಣಿ ಮಾಡಿಸಿರುವ ಯಾವುದೇ ವಿದ್ಯಾರ್ಥಿಯೂ ಗೈರು ಹಾಜರಾಗದಂತೆ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಜೀವನದ ಪ್ರಮುಖ ಘಟ್ಟವಾಗಿರುವುದರಿಂದ ಈ ಪರೀಕ್ಷೆಯ ಫಲಿತಾಂಶ ಸಂಖ್ಯಾತ್ಮಕವಾಗಿರುವುದಕ್ಕಿಂತ ಗುಣಾತ್ಮಕವಾಗಿರುವಂತೆ ಮತ್ತು ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಪ್ರಥಮ ಆದ್ಯತೆ ನೀಡಬೇಕು. ಪರೀಕ್ಷೆ ಕುರಿತಂತೆ ಬಿಗಿಯಾದ ಮೇಲ್ವಿಚಾರಣೆ ನಡೆಸಬೇಕು. ಪರೀಕ್ಷೆಯಲ್ಲಿ ಸಲ್ಲದ ವಿಷಯಗಳಿಗೆ ಆದ್ಯತೆ ನೀಡಿದ್ದು ಕಂಡುಬಂದರೆ, ಸಂಬಂಧಿಸಿದ ಡಿಡಿಪಿಐ ಹಾಗೂ ಬಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು.
ಆಯಾ ತಾಲೂಕು ಇಲ್ಲವೇ ಹೋಬಳಿ ಮಟ್ಟದಲ್ಲಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆಗಳನ್ನು ನಡೆಸಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದು ಸೇರಿದಂತೆ ವಿದ್ಯಾರ್ಥಿಗಳ ಅಭ್ಯಾಸದ ಪ್ರಗತಿ, ವಿದ್ಯಾರ್ಥಿಗಳನ್ನು ಪರೀಕ್ಷೆಯತ್ತ ಪ್ರೇರೇಪಣೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾಹಿತಿ ನೀಡಬೇಕು. ಪರೀಕ್ಷೆಗೆ ನೊಂದಣಿ ಮಾಡಿಸಿಯೂ ಸಹ ತರಗತಿಗೆ ಹಾಜರಾಗದಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸಿ ಅವರು ಪರೀಕ್ಷೆಗೆ ಹಾಜರಾಗುವಂತೆ ಗಮನಹರಿಸಬೇಕು. ಈ ಬಾರಿ ತರಗತಿ ಹಾಜರಿ ಕಡ್ಡಾಯವಲ್ಲವಾದ್ದರಿಂದ ತರಗತಿಗೆ ಹಾಜರಾಗದಿರುವ ಮಕ್ಕಳು ಎಲ್ಲಿದ್ದಾರೆ, ಪರೀಕ್ಷೆಗೆ ಹಾಜರಿ ಕುರಿತ ಅವರ ಭಾವನೆಗಳನ್ನು ಅರಿತು ಪರೀಕ್ಷೆಗೆ ಹಾಜರಾಗುವಂತೆ ಮನವೊಲಿಕೆ ಮತ್ತು ಪಠ್ಯಗಳ ಕುರಿತು ಸಲಹೆ ಸೂಚನೆಗಳನ್ನು ನೀಡಲು ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಗಮನಹರಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ಕೆಲ ಶಾಲೆಗಳಲ್ಲಿ ಪಠ್ಯಕ್ರಮ ಮುಗಿದು ಪುನರಾವರ್ತನೆ ಹಂತದಲ್ಲಿದ್ದರೆ, ಕೆಲವು ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಒಂದೆರಡು ಪಠ್ಯಗಳು ಬಾಕಿ ಇವೆ ಎಂಬ ಮಾಹಿತಿಯಿದ್ದು, ಸರ್ಕಾರಿ ಶಾಲೆಗಳಲ್ಲಿ ಯಾವುದೇ ವಿಷಯದ ಶಿಕ್ಷಕರ ಕೊರತೆಯಿದ್ದರೆ ಅಕ್ಕಪಕ್ಕದ ಶಾಲೆಗಳ ಶಿಕ್ಷಕರನ್ನು ಆ ಶಾಲೆಗಳಿಗೆ ನಿಯೋಜಿಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಎಸ್ ಎಸ್ ಎಲ್ ಸಿ ಪಠ್ಯಕ್ರಮ ಮತ್ತು ಪರೀಕ್ಷೆ ಕುರಿತಂತೆ ಪರಿಶೀಲಿಸಲು ತಾವು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಇದೇ ವಾರ ಬೆಳಗಾವಿ ವಿಭಾಗ ವ್ಯಾಪ್ತಿಯ 4 ಜಿಲ್ಲೆಗಳ ಪರಿಶೀಲನೆ ಮಾಡಿದ್ದೇನೆ. ಎಲ್ಲ ಕಡೆಯೂ ಪಠ್ಯ ಕ್ರಮ ಪುನರಾವರ್ತನೆ ಹಂತದಲ್ಲಿದ್ದು, ಆಯಾ ಭಾಗದ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹೋಗಿ ಪರೀಕ್ಷೆಯ ಮಹತ್ವ ಕುರಿತು ವಿವರಿಸುವುದು ಸೇರಿದಂತೆ ತಮ್ಮದೇ ಆದ ರೀತಿಯ ವಿದ್ಯಾರ್ಥಿ ಸಂಪರ್ಕದ ಮೂಲಕ ಅವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಪ್ರೇರಣೆಗೊಳಿಸುತ್ತಿದ್ದಾರೆ ಎಂದರು.
ಕೆಲವು ಕಡೆಗಳಲ್ಲಿ ಮುಖ್ಯೋಪಾಧ್ಯಾಯರು ತಾಯಂದಿರ ಸಭೆ ಕರೆದು ಪರೀಕ್ಷೆಯ ಮಹತ್ವವನ್ನು ವಿವರಿಸಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲ ಇಲಾಖೆಗಳು, ಸಂಘಸಂಸ್ಥೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಪರೀಕ್ಷೆ ನಡೆಸಲು ಸರ್ಕಾರ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದು, ಅದಕ್ಕಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರದ ಇಷ್ಟೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ಯಾವುದೇ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗದಂತೆ ಕ್ರಮ ವಹಿಸಬೇಕು. ಶಿಕ್ಷಕರಾಗಲೀ ಇಲ್ಲವೇ ಅಧಿಕಾರಿಗಳಾಗಲೀ ಇದೊಂದು ಸರ್ಕಾರಿ ಆದೇಶ ಎಂದು ತಿಳಿದುಕೊಳ್ಳುವುದಕ್ಕಿಂತ ಸ್ವಯಂಪ್ರೇರಣೆಯಿಂದ ಮಕ್ಕಳ ಪ್ರೇರೇಪಣೆಗೆ ಮುಂದಾಗಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ಈಗಾಗಲೇ ತರಗತಿಯಿಂದ ದೂರ ಇರುವ ಮಕ್ಕಳು ಯಾವ ಕಾರಣದಿಂದ ದೂರವಿದ್ದಾರೆ ಎಂಬ ಕುರಿತು ಫೋನ್ ಮೂಲಕ ಸಂಪರ್ಕಿಸಿ ಪರೀಕ್ಷೆ ಸಿದ್ಧತೆ ಕುರಿತು ಕೌನ್ಸೆಲಿಂಗ್ ಮಾಡಬೇಕು. ಈ ಕುರಿತು ಪ್ರತಿ ವಿದ್ಯಾರ್ಥಿಕುರಿತು ಶಿಕ್ಷಕರು ವೈಯಕ್ತಿಕ ಗಮನಹರಿಸಬೇಕು. ಈಗಿನಿಂದಲೇ ಸ್ಕೌಟ್ಸ್-ಗೈಡ್ಸ್, ರೆಡ್ ಕ್ರಾಸ್, ಎನ್.ಸಿ.ಸಿ.ಯಂತಹ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಹಕಾರವನ್ನು ಪಡೆಯಬೇಕು. ಕಳೆದ ಬಾರಿ ಶೈಕ್ಷಣಿಕ ವರ್ಷ ಮುಗಿದು ಪರೀಕ್ಷೆ ನಡೆಯುವ ಸಮಯಕ್ಕೆ ಮೂರ್ನಾಲ್ಕು ತಿಂಗಳಷ್ಟು ಅವಧಿಯ ಅಂತರವಿತ್ತು. ಆದರೆ ಈ ಬಾರಿ ಅಂತಹ ಸುರ್ದೀಘ ಅಂತರವೇನೂ ಇರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಓದಿದ್ದು ಮರೆತು ಹೋಗುವಂತಹ ಪ್ರಸಂಗವೂ ಇರುವುದಿಲ್ಲವಾದ್ದರಿಂದ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿಯುತ್ತಿದ್ದಾರೆ ಎಂಬುದನ್ನು ಈಗಿನಿಂದಲೇ ಅವರತ್ತ ವಿಶೇಷ ಗಮನ ಹರಿಸಿ ಉತ್ತಮ ಅಂಕಗಳನ್ನು ಪಡೆಯುವಂತೆ ಪ್ರೇರೇಪಣೆ ಮಾಡಬೇಕು ಎಂದು ಸಚಿವರು ವಿವರಿಸಿದರು.
ಈ ಬಾರಿ ಪರೀಕ್ಷಾ ಕೊಠಡಿಯಲ್ಲಿ ಗರಿಷ್ಠ 18 ರಿಂದ 20 ಮಕ್ಕಳಷ್ಟೇ ಇರಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಂಡಳಿಯಿಂದಲೇ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಬಂಡಲ್ ಗಳನ್ನು ಮಾಡಿ ರವಾನೆ ಮಾಡುವುದನ್ನು ಪರಿಶೀಲಿಸಲಾಗುತ್ತಿದೆ ಎಂದೂ ಹೇಳಿದ ಸಚಿವರು, ಈ ಬಾರಿಯ ಪರೀಕ್ಷೆ ಮಳೆಗಾಲದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರಿನ ಇರುಚಲಿನಿಂದಾಗಲೀ, ಇಲ್ಲವೇ ಕೊಠಡಿಯ ಮೇಲ್ಛಾವಣಿಯ ತುಣುಕುಗಳ ಬಿದ್ದು ಪರೀಕ್ಷಾ ಕೊಠಡಿ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುವಂತಿರಬಾರದು, ಇಂತಹ ಎಲ್ಲ ಸಣ್ಣಪುಟ್ಟ ವಿಷಯಗಳತ್ತಲೂ ಗಮನಹರಿಸಿ ಪರೀಕ್ಷೆಗಳು ಯಶಸ್ವಿಯಾಗುವಂತೆ ಗಮನಹರಿಸಬೇಕು. ಕಳೆದ ಬಾರಿಯ ಪರೀಕ್ಷೆ ಎಲ್ಲ ರೀತಿಯಲ್ಲು ಯಶಸ್ವಿಯಾಗಿದ್ದು, ಆಗ ಕಂಡುಬಂದ ಲೋಪದೋಷಗಳಿದ್ದಲ್ಲಿ ಅವಗಳನ್ನು ಸರಿಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ, ಶೌಚಾಲಯಗಳು, ನೀರಿನ ವ್ಯವಸ್ಥೆ, ಮಾಸ್ಕ್, ಸೋಪಿನ ವ್ಯವಸ್ಥೆ ಕುರಿತು ಗಮನಹರಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.