Home Uncategorized Stock Market Update: ಮೊದಲ ಬಾರಿ 63,000 ಗಡಿ ದಾಟಿದ ಸೆನ್ಸೆಕ್ಸ್; 19,000 ಸನಿಹದಲ್ಲಿ ನಿಫ್ಟಿ

Stock Market Update: ಮೊದಲ ಬಾರಿ 63,000 ಗಡಿ ದಾಟಿದ ಸೆನ್ಸೆಕ್ಸ್; 19,000 ಸನಿಹದಲ್ಲಿ ನಿಫ್ಟಿ

33
0

ಮುಂಬೈ: ದೇಶೀಯ ಷೇರುಪೇಟೆಗಳು (Stock Markets) ಏಳನೇ ದಿನವೂ ಗಳಿಕೆಯ ಓಟ ಮುಂದುವರಿಸಿದ್ದು, ಬಿಎಸ್​ಇ ಸೆನ್ಸೆಕ್ಸ್ (BSE Sensex) ಇದೇ ಮೊದಲ ಬಾರಿಗೆ 63,000 ಗಡಿ ದಾಟಿ ದಾಖಲೆ ನಿರ್ಮಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸ್ಥಿರತೆ ಹಾಗೂ ವಿದೇಶಿ ಹೂಡಿಕೆ ಹರಿದು ಬಂದ ಪರಿಣಾಮ ದೇಶದ ಷೇರುಪೇಟೆಗಳು ಚೇತರಿಕೆ ಕಂಡವು. ಸೆನ್ಸೆಕ್ಸ್ 417.81 ಅಂಶ ಚೇತರಿಕೆ ದಾಖಲಿಸಿ 63,099.65ರಲ್ಲಿ ಬುಧವಾರದ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ 63,303.01ರಲ್ಲಿ ವಹಿವಾಟು ನಡೆಸಿತು. ಎನ್​​ಎಸ್​ಇ ನಿಫ್ಟಿ (NSE Nifty) 140.30 ಅಂಶ ಚೇತರಿಸಿ 18,758.35ರಲ್ಲಿ ದಿನದ ವಹಿವಾಟು ಕೊನೆಗೊಳಿಸಿದ್ದು, 19,000ದತ್ತ ಮುನ್ನುಗ್ಗುತ್ತಿದೆ.

ಸೆನ್ಸೆಕ್ಸ್​ನಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಹಿಂದೂಸ್ತಾನ್ ಯುನಿಲೀವರ್, ಭಾರ್ತಿ ಏರ್​ಟೆಲ್, ಏಷ್ಯನ್ ಪೈಂಟ್ಸ್, ಟಾಟಾ ಸ್ಟೀಲ್ ಹಾಗೂ ಟೈಟಾನ್ ಉತ್ತಮ ಗಳಿಕೆ ದಾಖಲಿಸಿವೆ. ಮತ್ತೊಂದಡೆ, ಇಂಡಸ್​ಇಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ, ಎಚ್​ಸಿಎಲ್ ಟೆಕ್ನಾಲಜೀಸ್ ಹಾಗೂ ಐಸಿಟಿ ಷೇರುಗಳು ಕುಸಿತ ಕಂಡವು.

ಇದನ್ನೂ ಓದಿ: Stock Market Update: ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಸೆನ್ಸೆಕ್ಸ್, ನಿಫ್ಟಿ

ವಿದೇಶಿ ಹೂಡಿಕೆ ಹರಿದು ಬಂದಿರುವುದು ದೇಶೀಯ ಷೇರುಪೇಟೆಗಳ ಓಟಕ್ಕೆ ಕಾರಣವಾಗಿದೆ.​ ಆದಾಗ್ಯೂ, ಬಡ್ಡಿ ದರ ಪರಿಷ್ಕರಣೆ ವಿಚಾರವಾಗಿ ಫೆಡರಲ್ ಬ್ಯಾಂಕ್​ ಏನು ಹೇಳಿಕೆ ನೀಡಲಿದೆ ಎಂಬುದರ ಮೇಲೆ ಮಾರುಕಟ್ಟೆಯ ಮುಂದಿನ ನಡೆಯನ್ನು ಊಹಿಸಬಹುದಷ್ಟೇ. ಚೀನಾದಲ್ಲಿ ಕೋವಿಡ್ ನಿರ್ಬಂಧಗಳನ್ನು ಕಡಿಮೆ ಮಾಡುತ್ತಿರುವುದು ಜಾಗತಿಕ ಷೇರುಪೇಟೆಗಳನ್ನು ತುಸು ನಿರಾಳವಾಗಿಸಿದೆ ಎಂದು ಜಿಯೋಜಿತ್ ಪೈನಾನ್ಸಿಯಲ್ ಸರ್ವೀಸಸ್​ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.

ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,241.57 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದರು. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ದೇಶೀಯ ಷೇರುಪೇಟೆಗಳಿಗೆ ವಿದೇಶಿ ಹೂಡಿಕೆ ಹರಿದುಬರುತ್ತಿದೆ.

ಏಷ್ಯಾದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಬುಧವಾರ ಉತ್ತಮ ವಹಿವಾಟು ನಡೆದಿದೆ. ಸಿಯೋಲ್, ಶಾಂಘೈ ಹಾಗೂ ಹಾಂಗ್​ಕಾಂಗ್​ಗಳಲ್ಲಿ ಷೇರುಪೇಟೆಗಳು ಗಳಿಕೆ ಕಂಡಿವೆ. ಟೋಕಿಯೊದಲ್ಲಿ ನಷ್ಟ ಅನುಭವಿಸಿವೆ. ಯುರೋಪ್​ನಲ್ಲಿ ಷೇರುಪೇಟೆಗಳು ಉತ್ತಮ ವಹಿವಾಟು ನಡೆಸುತ್ತಿವೆ. ವಾಲ್​ಸ್ಟ್ರೀಟ್​ನಲ್ಲಿ ಮಂಗಳವಾರ ಮಿಶ್ರ ಫಲಿತಾಂಶ ಕಂಡುಬಂದಿತ್ತು.

ಕಚ್ಚಾ ತೈಲ ಬೆಲೆ ಹೆಚ್ಚಳ, ರೂಪಾಯಿ ಮೌಲ್ಯ ವೃದ್ಧಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 1.83ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್​ಗೆ 84.55 ಡಾಲರ್​ಗೆ ಮಾರಾಟವಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 33 ವೈಸೆ ವೃದ್ಧಿಯಾಗಿ 81.39ರಲ್ಲಿ ದಿನದ ವಹಿವಾಟು ಮುಗಿಸಿದೆ. ಹಿಂದಿನ ದಿನದ ವಹಿವಾಟಿನ ಮುಕ್ತಾಯದ ವೇಳೆಗೆ ರೂಪಾಯಿ ಮೌಲ್ಯ 3 ಪೈಸೆ ಕುಸಿದು 81.71ರಲ್ಲಿ ದಿನದ ವಹಿವಾಟು ಮುಗಿಸಿತ್ತು. ಇಂದು ಉತ್ತಮ ಚೇತರಿಕೆ ದಾಖಲಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here