Home ರಾಜಕೀಯ ಅಹಂಕಾರದ ಮಾತು ಬಿಡಿ; ಅಭಿವೃದ್ಧಿಗೆ ಹಣ ಕೊಡಿ- ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಆಗ್ರಹ

ಅಹಂಕಾರದ ಮಾತು ಬಿಡಿ; ಅಭಿವೃದ್ಧಿಗೆ ಹಣ ಕೊಡಿ- ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಆಗ್ರಹ

6
0

ಬೆಂಗಳೂರು: ಮುಖ್ಯಮಂತ್ರಿಗಳೇ, ಗ್ಯಾರಂಟಿಗಳಿಗೆ ಹಣ ಕೊಟ್ಟಿದ್ದೇವೆ ಎಂಬ ಅಹಂಕಾರದ ಮಾತನ್ನು ಬಿಡಿ; ಈ ಬಾರಿಯಾದರೂ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಪಕ್ಷಗಳ ಜನಪ್ರತಿನಿಧಿಗಳ ಪ್ರತಿಭಟನೆಯು ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ನಾಟಕ ಮಾಡುವುದಲ್ಲ; ಶಾಸಕರನ್ನು ಬೀದಿಗೆ ತಂದಿಟ್ಟಿದ್ದೀರಿ. ಈ ಬಾರಿಯಾದರೂ ಬಜೆಟ್‍ನಲ್ಲಿ ನಮ್ಮ ಕ್ಷೇತ್ರಗಳಿಗೆ ಅನುದಾನ ಕೊಡಿ ಎಂದು ಒತ್ತಾಯಿಸಿದರು.

ಅನುದಾನ ಇಲ್ಲದೆ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಥಿತಿಗೆ ಬಂದಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ರಾಜು ಕಾಗೆಯವರ ಮಾತು ಸರಿ ಇದೆ. ನಿನ್ನೆ ಬಿಜೆಪಿ- ಜೆಡಿಎಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಬಜೆಟ್ನಲ್ಲಿ ಆದರೂ ಅಭಿವೃದ್ಧಿಗೆ ಹಣ ಕೊಡಿ ಎಂದರೆ ಗ್ಯಾರಂಟಿಗೆ ಕೊಟ್ಟಿದ್ದೇವೆ ಎಂದು ಅಹಂಕಾರದ ಉತ್ತರ ಕೊಟ್ಟಿದ್ದಾರೆ ಎಂದು ಟೀಕಿಸಿದರು. ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ವಿವರಿಸಿದರು. ಬಜೆಟ್ ನೋಡಿ ರಾಜ್ಯದ ಜನರು ಕಣ್ಣೀರು ಹಾಕುತ್ತಿದ್ದಾರೆ ಎಂದು ತಿಳಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯದ ಸಾಧನೆ ಶೂನ್ಯವಾಗಿದೆ. ಇಡೀ ರಾಜ್ಯದಲ್ಲಿ ದಲಿತರು ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು. ದಲಿತರ ಹಣ ದುರುಪಯೋಗ ಆಗುತ್ತಿದೆ ಎಂದು ಟೀಕಿಸಿದರು.

ಅಭಿವೃದ್ಧಿಗೆ ಯಾಕೆ ಹಣ ನೀಡಿಲ್ಲ? ನಿಮಗೆ ಮಾನ ಮರ್ಯಾದೆ ಇಲ್ಲವೇ ಎಂದು ಕೇಳಿದರು. ಇದು ಅಭಿವೃದ್ಧಿ ಶೂನ್ಯ ಸರಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ವಿಧಾನ ಪರಿಷತ್ತಿನ ನಾಯಕ ಬೋಜೆಗೌಡ ಮತ್ತು ಎರಡೂ ಪಕ್ಷಗಳ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here