ಸ್ಟಾರ್ಟಪ್ ಸಮಾವೇಶ’ದಲ್ಲಿ ಸಚಿವ ಅಶ್ವತ್ಥನಾರಾಯಣ
ಬೆಂಗಳೂರು:
ಮಹಿಳಾ ಸ್ವಸಹಾಯ ಗುಂಪುಗಳಿಗೆ ತಂತ್ರಜ್ಞಾನ ತರಬೇತಿ, ಮಾರುಕಟ್ಟೆ ಲಭ್ಯತೆ ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸಲು ನೆರವಾಗುವ ಗುರಿಯುಳ್ಳ ಮೂರು ಒಡಂಬಡಿಕೆಗಳಿಗೆ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಅಂಕಿತ ಹಾಕಲಾಯಿತು.
ಶುಕ್ರವಾರ ಇಲ್ಲಿ ನಡೆದ `ನವೋದ್ಯಮ ಸಮಾವೇಶ’ದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಪ್ರತಿಭಾವಂತರನ್ನು ಆರ್ಥಿಕ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಮತ್ತು ಗರಿಷ್ಠ ಮಟ್ಟದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗುರಿಯಾಗಿದೆ.
ಈ ನಿಟ್ಟಿನಲ್ಲಿ ಮುಂದುವರಿದ ಕ್ರಮವಾಗಿ 1ಬ್ರಿಡ್ಜ್, ಕ್ಯಾಪ್ಟನ್ ಫ್ರೆಶ್ ಮತ್ತು ಕಲ್ಚರ್ ಸ್ಟ್ರೀಟ್ ಕಂಪನಿಗಳೊಂದಿಗೆ `ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್’ ಅಡಿ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.
ಈ ಪೈಕಿ `1ಬ್ರಿಡ್ಜ್’ ನವೋದ್ಯಮವು 6 ರಾಜ್ಯಗಳ 8,500 ಹಳ್ಳಿಗಳಲ್ಲಿ ಅಸ್ತಿತ್ವ ಹೊಂದಿದೆ. ಇದರ ಜತೆಗಿನ ಒಡಂಬಡಿಕೆಯಿಂದ ರಾಜ್ಯದಲ್ಲಿ ಗರಿಷ್ಠ 1 ಸಾವಿರ ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ತರಬೇತಿ ಸಿಕ್ಕಲಿದ್ದು, ಹೆಚ್ಚುವರಿ ಆದಾಯದ ಹಾದಿಗಳು ತೆರೆದುಕೊಳ್ಳಲಿವೆ. ಜತೆಗೆ ಕಂಪನಿಯ ಮೂಲಕ ಇ-ಕಾಮರ್ಸ್ ಸ್ವರೂಪದ ವಹಿವಾಟಿನ ಅನುಕೂಲ ಸಿಗಲಿದೆ ಎಂದು ಅವರು ಹೇಳಿದರು.
ಇದಲ್ಲದೆ, 1ಬ್ರಿಡ್ಜ್ ಕಂಪನಿಯು ಸಂಜೀವಿನಿ ಯೋಜನೆಯ `ಸಖಿ’ ಉಪಕ್ರಮದಡಿ ಅರ್ಹ ಮಹಿಳೆಯರಿಗೆ ಹೆಚ್ಚಿನ ತರಬೇತಿ ಕೊಡಲಿದ್ದು, ತನ್ನ ಕಾರ್ಯಜಾಲದಲ್ಲಿ ಇವರನ್ನೆಲ್ಲ ಸಲಹೆಗಾರರೆಂದು ತೆಗೆದುಕೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.
@KarnatakaKsrlps startup’s conclave organised today to engage-collaborate in rural transformation providing livelihood opportunities to rural SHGs women.3 MoUs signed with @1Bridge_one @captainfresh_in @kulturestreet.@Skill_Karnataka @drashwathcn @MoRD_GOI pic.twitter.com/XodXGvc7Xa
— Manjushree N (@ManjushreeN_IAS) February 18, 2022
ಕ್ಯಾಪ್ಟನ್ ಫ್ರೆಶ್’ ಸ್ಟಾರ್ಟಪ್ ಜತೆಗಿನ ಒಪ್ಪಂದದಿಂದಾಗಿ ಗ್ರಾಮೀಣ ಪ್ರದೇಶದ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿಸಿ ಚಿಲ್ಲರೆ ಮಾರುಕಟ್ಟೆಗೆ ತ್ವರಿತ ಗತಿಯಲ್ಲಿ ತಲುಪಿಸಲಾಗುವುದು. ಹಾಗೆಯೇ,
ಕಲ್ಚರ್ ಸ್ಟ್ರೀಟ್’ ಕಂಪನಿಯು ಸ್ವಸಹಾಯ ಸಂಘಗಳಲ್ಲಿ ಸಕ್ರಿಯವಾಗಿರುವ ಮಹಿಳೆಯರು ತಯಾರಿಸುತ್ತಿರುವ ಟೆರಾಕೋಟಾ ಮತ್ತು ಚರ್ಮದ ಬೊಂಬೆಗಳಿಗೆ ಅಗತ್ಯ ಮಾರುಕಟ್ಟೆ ಒದಗಿಸಿ ಕೊಡುವ ಮೂಲಕ, ಮೌಲ್ಯವರ್ಧನೆ ಮಾಡಲಿದೆ. ಜತೆಗೆ, ತಂತ್ರಜ್ಞಾನ ತರಬೇತಿ ಮತ್ತು ನೂತನ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ನೆರವು ನೀಡಲಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಚರಣಜಿತ್ ಸಿಂಗ್, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಜೀವಿನಿ ಮಿಷನ್ ನಿರ್ದೇಶಕಿ ಮಂಜುಶ್ರೀ, ತಮಿಳುನಾಡಿನ ಎನ್ ಆರ್ ಎಲ್ ಎಂ ಮಿಷನ್ ಡೈರೆಕ್ಟರ್ ಪಲ್ಲವಿ ಉಪಸ್ಥಿತರಿದ್ದರು.
100 ಸ್ವಸಹಾಯ ಗುಂಪುಗಳ ದತ್ತು
ಇದೇ ಸಂದರ್ಭದಲ್ಲಿ ಸಚಿವರು, ಟಿಐಇ ಕಂಪನಿಯು ರಾಜ್ಯದ 100 ಮಹಿಳಾ ಸ್ವಸಹಾಯ ಸಂಘಗಳನ್ನು ದತ್ತು ತೆಗೆದುಕೊಳ್ಳುತ್ತಿರುವುದಾಗಿ ಪ್ರಕಟಿಸಿದರು.
ಈ ಉಪಕ್ರಮದಡಿ ಕಂಪನಿಯು ಈ ಸ್ವಸಹಾಯ ಗುಂಪುಗಳಿಗೆ ಒಂದು ವರ್ಷದ ಮಟ್ಟಿಗೆ ವೃತ್ತಿಪರ ತರಬೇತಿ ನೀಡಲಿದೆ. ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಭಾಗಗಳಲ್ಲೂ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಅವರು ತಿಳಿಸಿದರು.
ಸ್ಟಾರ್ಟಪ್ ಚಾಲೆಂಜ್-2022’ ಸ್ಪರ್ಧೆ
ಸಂಜೀವಿನಿ’ ಯೋಜನೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ನವೋದ್ಯಮಗಳು ನವೀನ ಮಾದರಿಯ ಮತ್ತು ಸಮಕಾಲೀನ ಬೇಡಿಕೆಗಳ ತಕ್ಕ ಉತ್ಪನ್ನಗಳನ್ನು ಉತ್ಪಾದಿಸಲು
ಸಂಜೀವಿನಿ-ಸ್ಟಾರ್ಟಪ್ ಚಾಲೆಂಜ್-2022’ ಸ್ಪರ್ಧೆಗೆ ಕೂಡ ಅಶ್ವತ್ಥನಾರಾಯಣ ಅವರು ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿಸಿದರು.
ಈ ಸ್ಪರ್ಧೆಯಿಂದಾಗಿ ಇ-ಕಾಮರ್ಸ್, ಲಾಜಿಸ್ಟಿಕ್ಸ್, ಗ್ರಾಮೀಣಾಭಿವೃದ್ಧಿ, ಕೃಷಿ, ಪಶು ಸಂಗೋಪನೆ, ಬ್ರ್ಯಾಂಡಿಂಗ್ ಮತ್ತು ಮರ್ಕಂಡೈಸಿಂಗ್ ಕ್ಷೇತ್ರಗಳಲ್ಲಿ ಸಾಫ್ಟ್ವೇರ್ ಹಾಗೂ ಇಂಟರ್ನೆಟ್ ಆಧಾರಿತ ನಾವೀನ್ಯತಾ ಸಂಶೋಧನೆಗಳಿಗೆ ಉತ್ತೇಜನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.