ಬೆಳಗಾವಿ, ಡಿ.10: ಆರ್ಟಿಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಕಂಡುಬಂದರೆ ಕಚೇರಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ತಿನಲ್ಲಿ ಡಾ.ಉಮಾಶ್ರೀ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್ಟಿಓ ಕಚೇರಿಗಳಲ್ಲಿ ಶಿಸ್ತು ತರಲು ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಕಚೇರಿಯಲ್ಲಿ ಸ್ವೀಕರಿಸುವ ಎಲ್ಲ ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಮಾತ್ರ ವಹಿಸಬೇಕು, ವಹಿಗಳನ್ನು ವಾರಕ್ಕೊಮ್ಮೆ ಅಧೀಕ್ಷಕರು ಪರಿಶೀಲಿಸಬೇಕು ಮತ್ತು ತಿಂಗಳಿಗೊಮ್ಮೆ ಮೇಜು ತಪಾಸಣೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂಬಂತೆ ಸಾರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
“ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದರೆ, ಆರ್ಟಿಓ ಅಧಿಕಾರಿಗಳೇ ನೇರವಾಗಿ ಹೊಣೆ, ನಿಯಮಾನುಸಾರ ಶಿಸ್ತು ಕ್ರಮ ಅನಿವಾರ್ಯ,” ಎಂದು ಸಚಿವರು ಹೇಳಿದರು.
ಜನರು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಕಚೇರಿ ಸಿಬ್ಬಂದಿಯನ್ನು ಭೇಟಿ ಮಾಡುವಂತೆ ಸೂಚನಾ ಫಲಕಗಳನ್ನು ಕಚೇರಿಗಳಲ್ಲಿ ಅಳವಡಿಸಲಾಗಿದೆ.
ಲೋಕಾಯುಕ್ತರ ದೂರವಾಣಿ ಸಂಖ್ಯೆ ಮತ್ತು ಕಚೇರಿ ವಿಳಾಸಗಳನ್ನೂ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ.
ಮಧ್ಯವರ್ತಿಗಳ ಹಾವಳಿ ತಡೆಯಲು 2021ರ ನವೆಂಬರ್ 1ರಿಂದ ಸಾರಿಗೆ ಇಲಾಖೆಯ 52 ಸೇವೆಗಳನ್ನು ಸಂಪೂರ್ಣ ಆನ್ಲೈನ್ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
