ಬೆಂಗಳೂರು, ಜನವರಿ 1:ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸರ್ವಿಸ್ ಅಪಾರ್ಟ್ಮೆಂಟ್, ಹಾಸ್ಟೆಲ್ ಹಾಗೂ ಪೇಯಿಂಗ್ ಗೆಸ್ಟ್ (PG) ವಸತಿ ವ್ಯವಸ್ಥೆಗಳಲ್ಲಿ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಕಡ್ಡಾಯ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಇತ್ತೀಚೆಗೆ ಸಂಭವಿಸಿರುವ ಗ್ಯಾಸು ಸ್ಫೋಟ ಹಾಗೂ ಅಗ್ನಿ ಅವಘಡಗಳಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯುವುದು ಮತ್ತು ಸಾರ್ವಜನಿಕರ ಜೀವ–ಆಸ್ತಿಯ ಸುರಕ್ಷತೆ ಖಚಿತಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಪಿಜಿ, ಹಾಸ್ಟೆಲ್ ಮತ್ತು ಸರ್ವಿಸ್ ಅಪಾರ್ಟ್ಮೆಂಟ್ ಮಾಲೀಕರು, ನಿರ್ವಹಕರು ಹಾಗೂ ಆಪರೇಟರ್ಗಳು ತಮ್ಮ ಸಂಸ್ಥೆಗಳಲ್ಲಿ ಸ್ವಯಂ ಪರಿಶೀಲನೆ ನಡೆಸಿ, ನಿಗದಿತ ಅವಧಿಯೊಳಗೆ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಪಾಲಿಸಬೇಕಾದ ಪ್ರಮುಖ ಸುರಕ್ಷತಾ ನಿಯಮಗಳು:
- ಅಧಿಕೃತ ಮತ್ತು ಸುರಕ್ಷಿತ ಎಲ್ಪಿಜಿ/ಗ್ಯಾಸು ಸಂಪರ್ಕಗಳ ಬಳಕೆ
- ಅಕ್ರಮ ಹಾಗೂ ಅಪಾಯಕಾರಿಯಾದ ಗ್ಯಾಸು ಸಿಲಿಂಡರ್ಗಳ ಸಂಪೂರ್ಣ ನಿಷೇಧ
- ಸಮರ್ಪಕ ಗಾಳಿ ಸಂಚಾರ ವ್ಯವಸ್ಥೆ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳು
- ವಿದ್ಯುತ್ ಸುರಕ್ಷತೆ ಮತ್ತು ಓವರ್ಲೋಡ್ ತಡೆ ಕ್ರಮಗಳು
- ಮಾನ್ಯವಾದ ವಾಣಿಜ್ಯ ಪರವಾನಗಿ (ಟ್ರೇಡ್ ಲೈಸೆನ್ಸ್) ಮತ್ತು ಅಗತ್ಯ ನೋಂದಣಿಗಳು
7 ದಿನಗಳ ಅವಧಿ:
ಎಲ್ಲಾ ಪಿಜಿ, ಹಾಸ್ಟೆಲ್ ಮತ್ತು ಸರ್ವಿಸ್ ಅಪಾರ್ಟ್ಮೆಂಟ್ಗಳಿಗೆ 7 ದಿನಗಳ ಅವಧಿ ನೀಡಲಾಗಿದ್ದು, ಈ ಅವಧಿಯಲ್ಲಿ ಸುರಕ್ಷತಾ ಲೋಪಗಳನ್ನು ಸರಿಪಡಿಸಿ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕಾಗಿದೆ.
ಪರಿಶೀಲನೆ ಮತ್ತು ಕಠಿಣ ಕ್ರಮ:
ನಿಗದಿತ ಅವಧಿ ಮುಗಿದ ನಂತರ, ನಗರ ಪಾಲಿಕೆಯು ವಿಶೇಷ ತಪಾಸಣಾ ಅಭಿಯಾನ ನಡೆಸಲಿದೆ. ಸುರಕ್ಷತಾ ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ:
- ಸಂಸ್ಥೆ ಸೀಲ್ ಮಾಡುವುದು
- ವಾಣಿಜ್ಯ ಪರವಾನಗಿ ರದ್ದುಪಡಿಸುವುದು ಅಥವಾ ಸ್ಥಗಿತಗೊಳಿಸುವುದು
- ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ–2024 ಹಾಗೂ ಇತರ ಕಾನೂನುಗಳ ಅಡಿಯಲ್ಲಿ ದಂಡ ವಿಧಿಸುವುದು
ಅಪಾಯ ಗಂಭೀರವಾಗಿದೆ ಎಂದು ಕಂಡುಬಂದಲ್ಲಿ, ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
