ಬೆಂಗಳೂರು: ಜೈಲು ಡಿಜಿಪಿಯಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ, ಕರ್ನಾಟಕ ಜೈಲು ಇಲಾಖೆಯಲ್ಲಿ ಶಿಸ್ತು ಮತ್ತು ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ವ್ಯಾಪಕ ಶುದ್ಧೀಕರಣ ಕಾರ್ಯಾಚರಣೆ ಆರಂಭವಾಗಿದೆ. ಕಳೆದ 36 ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವು ಪ್ರಮುಖ ಜೈಲುಗಳಲ್ಲಿ ನಡೆಸಲಾದ ತೀವ್ರ ಶೋಧ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಳಸಲಾಗುತ್ತಿದ್ದ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳು ವಶಪಡಿಸಿಕೊಳ್ಳಲಾಗಿದೆ.
ಜೈಲುಗಳಲ್ಲಿ ಅಕ್ರಮ ಸಂವಹನ ಜಾಲಗಳನ್ನು ಸಂಪೂರ್ಣವಾಗಿ ಮುರಿಯುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಯಾವುದೇ ಮುನ್ನೋಟವಿಲ್ಲದೆ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಜೈಲು ಇಲಾಖೆ ಮೂಲಗಳು ತಿಳಿಸಿವೆ.
ವಶಪಡಿಸಿಕೊಂಡ ವಸ್ತುಗಳ ವಿವರ ಹೀಗಿದೆ:
- ಕಲಬುರಗಿ ಜೈಲು: 10 ಮೊಬೈಲ್ ಫೋನ್ಗಳು, 4 ಸಿಮ್ ಕಾರ್ಡ್ಗಳು
- ಮಂಗಳೂರು ಜೈಲು: 6 ಮೊಬೈಲ್ ಫೋನ್ಗಳು
- ಬಳ್ಳಾರಿ ಜೈಲು: 4 ಮೊಬೈಲ್ ಫೋನ್ಗಳು
- ಶಿವಮೊಗ್ಗ ಜೈಲು: 3 ಮೊಬೈಲ್ ಫೋನ್ಗಳು, 4 ಸಿಮ್ ಕಾರ್ಡ್ಗಳು
ಜೈಲು ಒಳಗೆ ಮೊಬೈಲ್ ಬಳಕೆ, ಅಕ್ರಮ ಕರೆಗಳು, ಹೊರಗಿನ ಅಪರಾಧ ಜಾಲಗಳೊಂದಿಗೆ ಸಂಪರ್ಕ ಇತ್ಯಾದಿಗಳನ್ನು ಸಂಪೂರ್ಣವಾಗಿ ತಡೆಯುವುದು ಈ ವಿಶೇಷ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜೈಲುಗಳಲ್ಲಿ ಇದೇ ಮಾದರಿಯ ಅಕಸ್ಮಿಕ ಶೋಧ ಕಾರ್ಯಾಚರಣೆಗಳು ನಿರಂತರವಾಗಿ ನಡೆಯಲಿವೆ ಎಂದು ಜೈಲು ಇಲಾಖೆ ಸ್ಪಷ್ಟಪಡಿಸಿದೆ.
ಜೈಲು ವ್ಯವಸ್ಥೆಯ ಪಾವಿತ್ರ್ಯ, ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
