ಬೆಂಗಳೂರು: ಸೀನಿಯರ್ ಅಧಿಕಾರಿಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ಆಟೋ ಟಿಪ್ಪರ್ಗಳಿಗೆ ಮನೆಮನೆಗೆ ಹಸಿ ಮತ್ತು ಒಣಕಸ ಪ್ರತ್ಯೇಕವಾಗಿ ಸಂಗ್ರಹಿಸುವ ಸೂಚನೆ ನೀಡಿದ ಪರಿಣಾಮ, ರಸ್ತೆ ಬದಿಯಲ್ಲಿ ಕಸ ಬಿಸಾಡುವ ಘಟನೆಗಳು ಕಡಿಮೆಯಾಗಿದ್ದು, ನಗರದ ಸ್ವಚ್ಛತೆ ಮಟ್ಟ ಸುಧಾರಿಸಿದೆ, ಎಂದು ಬಿ.ಎಸ್.ಡಬ್ಲ್ಯು.ಎಂ.ಎಲ್ (BSWML) ಸಿಇಒ ಕರೀಗೌಡ ತಿಳಿಸಿದ್ದಾರೆ.
ಇದರಿಂದ ಆಟೋ ಟಿಪ್ಪರ್ ಹಾಜರಾತಿ ಶೇ. 85ರಿಂದ 95ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಸ್ಕ್ಯಾನಿಂಗ್ ಸಮಯ ಮತ್ತು ಮೇಲ್ವಿಚಾರಣೆ
ಜಿಬಿಎ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ವಾಹನಗಳ ಸ್ಕ್ಯಾನಿಂಗ್ ಸಮಯವನ್ನು ಬೆಳಿಗ್ಗೆ 5.30ರಿಂದ 6.30ರವರೆಗೆ ನಿಗದಿಪಡಿಸಲಾಗಿದೆ. ಕಳೆದ 15 ದಿನಗಳಿಂದ ಸಿಇಒ, ಸಿಒಒ, 4 ಡಿಜಿಎಂಗಳು, 28 ಎಜಿಎಂಗಳು, ಚೀಫ್ ಮಾರ್ಷಲ್ ಸೇರಿ ಎಲ್ಲಾ ಹಿರಿಯ ಅಧಿಕಾರಿಗಳು ಪ್ರತಿದಿನ ಸುಮಾರು 200 ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಹಾಜರಾತಿ ಪರಿಶೀಲನೆ ನಡೆಸುತ್ತಿದ್ದಾರೆ.

ಟೆಕ್ ಆಧಾರಿತ ಮೇಲ್ವಿಚಾರಣೆ
ಅಧಿಕಾರಿಗಳ ಹಾಜರಾತಿ ಹಾಗೂ ಪರಿಶೀಲನೆಗಳನ್ನು ಆನ್ಲೈನ್ ಮೂಲಕ ವೀಕ್ಷಿಸಲು “ಟ್ರ್ಯಾಕ್ ಡ್ಯೂಟಿ” ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಮೂಲಕ ನೈಜಕಾಲದ (real-time) ಪರಿಶೀಲನೆ ಸಾಧ್ಯವಾಗಿದೆ ಎಂದು ಕರೀಗೌಡ ಹೇಳಿದರು.
ಈ ಕ್ರಮದಿಂದ ಸ್ವಚ್ಛ ನಗರಿ ನಿರ್ಮಾಣದ ದಿಸೆಯಲ್ಲಿ ಗಂಭೀರ ಬದಲಾವಣೆ ಆಗಿದ್ದು, ತ್ಯಾಜ್ಯ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಪಾರದರ್ಶಕತೆ ಮೂಡಿದೆ.
