ಬೆಂಗಳೂರು: ದಕ್ಷಿಣ ಬೆಂಗಳೂರು ನಗರ ಪಾಲಿಕೆ ಆಯುಕ್ತರು ನಿನ್ನೆ ರಾತ್ರಿ ಹೆಚ್.ಎಸ್.ಆರ್. ಲೇಔಟ್ನ 16ನೇ ‘ಎ’ ಮುಖ್ಯರಸ್ತೆಯಲ್ಲಿರುವ ಉದ್ಯಾನವನಕ್ಕೆ ದಿಢೀರ್ ಭೇಟಿ ನೀಡಿ, ಬೀದಿ ದೀಪಗಳು ಹಾಗೂ ಉದ್ಯಾನವನದ ವಿದ್ಯುತ್ ದೀಪಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.
ಆಯುಕ್ತರ ಭೇಟಿ ಗಮನಿಸಿದ ಸ್ಥಳೀಯ ನಿವಾಸಿಗಳ ಸಂಘದ ಪ್ರತಿನಿಧಿಗಳು ಹಾಗೂ ವಾಯುವಿಹಾರಿಗಳು ತಮ್ಮ ಪ್ರದೇಶದಲ್ಲಿನ ಹಲವು ಸಮಸ್ಯೆಗಳ ಕುರಿತು ನೇರವಾಗಿ ಮನವಿ ಸಲ್ಲಿಸಿದರು. ಅನಧಿಕೃತ ಪಾರ್ಕಿಂಗ್ ಹಾವಳಿ, ಪಾದಚಾರಿ ಮಾರ್ಗ ಒತ್ತುವರಿ, ಬೀದಿ ದೀಪಗಳ ಸಮಸ್ಯೆ ಸೇರಿದಂತೆ ಹಲವು ನಾಗರಿಕ ಸಮಸ್ಯೆಗಳ ಬಗ್ಗೆ ನಿವಾಸಿಗಳು ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಆಯುಕ್ತರು, ಪ್ರತಿ ವಾರ್ಡಿಗೂ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ ಎಂದು ತಿಳಿಸಿದರು. ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರದಲ್ಲಿ ನಾಗರಿಕ ಸೇವೆಗಳ ಗುಣಮಟ್ಟ ಸುಧಾರಣೆ ಹಾಗೂ ಆಡಳಿತದ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಇಂತಹ ದಿಢೀರ್ ಪರಿಶೀಲನೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ಹೇಳಿದರು.
