ಬೆಂಗಳೂರು, ಮಾರ್ಚ್ 17: ಮುಂದಿನ ಕಬ್ಬು ನುರಿಸುವ ಹಂಗಾಮೆಯಿಂದ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಪರಿಷತ್ತಿನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಸಚಿವರು ಕೇಂದ್ರ ಸರ್ಕಾರ ಸಕ್ಕರೆಯ ಎಂಎಸ್ಪಿ ದರ ಹೆಚ್ಚಿಸಿದರೆ, ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚಿಸಲಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರ ಬೇಡಿಕೆಗಳಲ್ಲಿ ವಿದ್ಯುತ್ ಖರೀದಿ ಒಪ್ಪಂದ ಮತ್ತು ನೀರಿನ ತೆರಿಗೆ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪರಿಗಣಿಸುವುದಾಗಿ ಭರವಸೆ ನೀಡಲಾಗಿದೆ.
ಕೇಂದ್ರ ಸರ್ಕಾರ ಸಕ್ಕರೆ ರಫ್ತು ಮಾಡಲು ಅವಕಾಶ ನೀಡಬೇಕು ಮತ್ತು ಎಥೆನಾಲ್ ದರ ಪರಿಷ್ಕರಣೆ ಮಾಡಬೇಕು. ಈ ಬೇಡಿಕೆಗಳಿಗೆ ಕೇಂದ್ರ ಸ್ಪಂದಿಸಿದರೆ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ, ಸಕ್ಕರೆಗೆ ಎಲ್ಪಿಜಿ ರೀತಿ ಗೃಹ ಬಳಕೆಗೆ ಬೇರೆ ಹಾಗೂ ವಾಣಿಜ್ಯ ಬಳಕೆಗೆ ಬೇರೆ ದರ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ಪರಿಗಣಿಸಿದರೆ, ಗ್ರಾಹಕರಿಗೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸತತ ಎರಡು ವರ್ಷ ಕಬ್ಬು ಬೆಳೆಗಾರರಿಗೆ ಸಂಪೂರ್ಣ ಹಣ ಪಾವತಿ ಮಾಡಲಾಗಿದೆ. ಈ ವರ್ಷವೂ ಕ್ರಷಿಂಗ್ ನಡೆಯುತ್ತಿದೆ ಮತ್ತು ಸಂಪೂರ್ಣ ಪ್ರಮಾಣದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕದಲ್ಲಿ ಮಾತ್ರ ರೈತರಿಗೆ ಸಂಪೂರ್ಣ ಪ್ರಮಾಣದಲ್ಲಿ ಕಬ್ಬಿನ ಬಿಲ್ ಪಾವತಿ ಮಾಡಲಾಗಿದೆ, ಆದರೆ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ರೈತರ ಕಬ್ಬಿನ ಬಿಲ್ ಬಾಕಿ ಇದೆ ಎಂದು ಸಚಿವರು ಮಾಹಿತಿ ನೀಡಿದರು.
