
ಬೆಂಗಳೂರು : ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಕ್ಕೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎಗೆ ವಹಿಸಬೇಕೆಂಬುದು ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಎಂಟು ಜನರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ. ಹಾಗಾಗಿ ಈ ಪ್ರಕರಣ ಎನ್ಐಎಗೆ ಕೊಟ್ಟಿಲ್ಲ, ಅದರ ಅಗತ್ಯವೂ ಇಲ್ಲ ಎಂದರು.
ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸುತ್ತಾರೆ. ಆದರೆ, ಅವರ ಕಾಲದಲ್ಲೂ ಕೊಲೆ, ದರೋಡೆಗಳು ನಡೆದಿವೆ. ಹಿಂದಿನ ಎರಡು ವರ್ಷಗಳಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶೇ.99ರಷ್ಟು ಕ್ರಮ ತೆಗೆದುಕೊಂಡಿದ್ದೇವೆ. ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಏನೇ ಕಾರಣವಿದ್ದರೂ ತನಿಖೆ ನಡೆಸಿದ ಮೇಲೆ ಗೊತ್ತಾಗುತ್ತದೆ. ನಾವು ಊಹೆ ಮಾಡಿ ಇದೇ ಕಾರಣವೆಂದು ಹೇಳುವುದಕ್ಕಾಗುವುದಿಲ್ಲ. ತನಿಖೆ ಮುಗಿಯುವವರೆಗೂ ಏನೂ ಹೇಳಲಾಗುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಂಗಳೂರು ಭೇಟಿ ವೇಳೆ ಕೇವಲ ಮುಸ್ಲಿಮ್ ಸಮುದಾಯದ ಜೊತೆ ಸಭೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ನಾವು ಸಭೆಯನ್ನು ಕರೆದಿಲ್ಲ. ಅವರಾಗಿಯೇ ಬಂದಿದ್ದರು. ಐಬಿಗೆ ಬಂದಾಗ ಬೇಡ ಎನ್ನಲು ಆಗುತ್ತದೆಯೇ?, ನಮ್ಮ ಪಕ್ಷದವರು ಬಂದಿದ್ದರು, ಬೇರೆ ಪಕ್ಷದವರು ಬಂದಿರಲಿಲ್ಲ. ನಮ್ಮ ಪಕ್ಷದ ರಮಾನಾಥ್ ರೈ ಕೂಡ ಬಂದಿದ್ದರು. ರಮಾನಾಥ್ ರೈ ಹಿಂದೂ ಅಲ್ಲವೇ? ಎಂದು ಪ್ರಶ್ನಿಸಿದರು.
ಕೊಲೆಯಾದ ಸುಹಾಸ್ ಶೆಟ್ಟಿ ಮೇಲೆ ಐದು ಪ್ರಕರಣಗಳಿವೆ. ಹಾಗಾಗಿ ನಾವು ಯಾರೂ ಅವರ ಮನೆಗೆ ಭೇಟಿ ಕೊಟ್ಟಿಲ್ಲ. ಇದೊಂದು ಕೊಲೆ ಪ್ರಕರಣ. ಆದರೆ ಸುಹಾಸ್ ಶೆಟ್ಟಿ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸರಕಾರ ಮಾಡಲಿದೆ. ಇದು ಪ್ರತೀಕಾರಕ್ಕೆ ನಡೆದಿದೆಯೇ, ಇಲ್ಲವೇ ಎನ್ನುವುದು ತನಿಖೆ ನಡೆಸಿದ ಮೇಲೆ ಗೊತ್ತಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.