ಬೆಂಗಳೂರು: ಮುಂಬರುವ ಬೇಸಿಗೆಯಲ್ಲಿ ನಗರದ ಕೊಳಗೇರಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಪಾಂತರಪಾಳ್ಯ, ನಾಯಂಡನಹಳ್ಳಿ ಕೊಳಗೇರಿ ಪ್ರದೇಶದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳುತ್ತಿರುವ ಸಿದ್ಧತೆಗಳನ್ನು ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಪರಿಶೀಲಿಸಿ ಸೂಚನೆ ನೀಡಿದರು.
ಪಾಂತರಪಾಳ್ಯ, ನಾಯಂಡನಹಳ್ಳಿಯ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲು ಮಾಡಿಕೊಂಡಿರುವ ಸಿದ್ಧತೆಗಳು ಹಾಗೂ ಅಳವಡಿಸಲಾಗಿರುವ ನೀರಿನ ಟ್ಯಾಂಕ್ಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಪರಿಶೀಲನೆ ವೇಳೆ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿದ ಅಧ್ಯಕ್ಷರು, ಅವರ ಅಹವಾಲುಗಳನ್ನು ಆಲಿಸಿದರು. “ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಮಂಡಳಿಯಿಂದ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರವಹಿಸಲಾಗುವುದು,” ಎಂದು ಸ್ಥಳೀಯರಿಗೆ ಭರವಸೆ ನೀಡಿದರು.
ಪರಿಶೀಲನೆಯ ಬಳಿಕ ಜಲಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದ ಡಾ. ರಾಮ್ ಪ್ರಸಾತ್ ಮನೋಹರ್ ಅವರು, “ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ, ಸದಾ ಈ ಫೀಲ್ಡ್ನಲ್ಲಿ ಇದ್ದು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಜನರಿಗೆ ಅದರಲ್ಲೂ ಕೊಳಗೇರಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು,” ಎಂದು ನಿರ್ದೇಶಿಸಿದರು.
